

ಕುಂದಾಪುರ: ಮಳೆಗಾಲ ಆರಂಭಕ್ಕೆ ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ಕುಂದಾಪುರ ಪುರಸಭೆಯಿಂದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛಗೊಳಿಸುವುದು ಸಹಿತ ಹಲವು ಮುನ್ನೆಚ್ಚರಿಕೆ ಕಾರ್ಯಗಳು ಆರಂಭಗೊಂಡಿದೆ. ಆದರೆ ಕೆಲಸ ಮಾತ್ರ ಆಮೆನಡಿಗೆಯಲ್ಲಿ ಸಾಗುತ್ತಿದೆ.
ಈಗಾಗಲೇ ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ಹೂಳು, ತ್ಯಾಜ್ಯಗಳ ತೆರವು ಕಾರ್ಯ ಪ್ರಾರಂಭಗೊಂಡಿದೆಯಾದರೂ, ಮಳೆಗಾಲದ ಪೂರ್ವದಲ್ಲಿ ನಡೆಯಬೇಕಿದ್ದ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಈಗಾಗಲೇ ಸುರಿದಿರುವ ಬೇಸಿಗೆ ಮಳೆ ಪುರಸಭೆಯ ಚರಂಡಿ ಸ್ವಚ್ಛತೆಯ ಅಸಲಿಯತ್ತನ್ನು ತೋರಿಸಿದೆ. ಸಣ್ಣಪುಟ್ಟ ತೋಡು, ಚರಂಡಿಗಳಲ್ಲಿ ತ್ಯಾಜ್ಯಗಳು ತುಂಬಿ ತುಳುಕುತ್ತಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಚರಂಡಿ ಸ್ವಚ್ಛಗೊಳಿಸದಿದ್ದರೆ ಅನೇಕ ಕಡೆಗಳಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆಗಳಿವೆ.
ರಾಶಿ ರಾಶಿ ತ್ಯಾಜ್ಯ ಸಂಗ್ರಹ: ಪುರಸಭಾ ವ್ಯಾಪ್ತಿಯ ಪ್ರಮುಖ ಚರಂಡಿಗಳಾದ ಸುಡುಗಾಡು ತೋಡು, ಕಲ್ಲಾಗರ, ಬರೆಕಟ್ಟು, ಮದ್ದುಗುಡ್ಡೆ, ವಿಠಲವಾಡಿ ಮತ್ತು ಸಣ್ಣ ಪುಟ್ಟ ತೋಡುಗಳಲ್ಲಿ ತ್ಯಾಜ್ಯದ ರಾಶಿ ಶೇಖರಣೆಯಾಗಿದ್ದು, ಇನ್ನೂ ಸ್ವಚ್ಛತಾ ಕಾರ್ಯ ಆರಂಭವಾಗಿಲ್ಲ. ಜತೆಗೆ ಹಲವು ಪ್ರಮುಖ ಮಳೆ ನೀರು ಹರಿದು ಹೋಗುವ ತೋಡುಗಳಲ್ಲಿ ಕೊಳಚೆ ನೀರು ಸಂಗ್ರಹಗೊಂಡಿರುವುದರಿಂದ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ತೋಡಿನಲ್ಲಿ ತುಂಬಿರುವ ಹೂಳನ್ನು ತೆರವು ಮಾಡುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಹಲವು ಚರಂಡಿಗಳಲ್ಲಿ ದೊಡ್ಡ ಮಟ್ಟದ ತ್ಯಾಜ್ಯಗಳ ರಾಶಿಯೇ ಸಂಗ್ರಹಗೊಂಡಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಚರಂಡಿ ಬ್ಲಾಕ್ ಆಗುತ್ತದೆ. ಚರಂಡಿಗಳಲ್ಲೂ ಹೂಳು ತುಂಬಿದ್ದು, ಇದು ನೇರವಾಗಿ ತೋಡಿಗೆ ಸೇರುವ ಕಾರಣ ಕೃತಕ ನೆರೆ ಉಂಟಾಗುವ ಸಾಧ್ಯತೆಯೂ ಇದೆ.
ಕಾರ್ಮಿಕರ ಕೊರತೆ ಹಿನ್ನೆಲೆ ಪುರಸಭೆ ವ್ಯಾಪ್ತಿಯ ಅನೇಕ ಪ್ರಮುಖ ಚರಂಡಿಗಳ ಸ್ವಚ್ಛತೆ, ಹೂಳು ತೆಗೆಯುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಪುರಸಭೆಯಲ್ಲಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಚರಂಡಿ ಸ್ವಚ್ಛಗೊಳಿಸುವ ಕೆಲಸ ಕೈಗೆತ್ತಿಕೊಂಡಿರುವ ಪುರಸಭೆ, ಇನ್ನಷ್ಟು ವೇಗ ನೀಡಬೇಕಾಗಿದೆ. ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಕುಂದಾಪುರ ಪುರಸಭೆ ಮಳೆಗಾಲದ ಪೂರ್ವದಲ್ಲಿ ಚರಂಡಿ ಸ್ವಚ್ಛತೆ, ಹೂಳು ತೆಗೆಯುವ ಕೆಲಸ ಆದಷ್ಟು ಬೇಗ ಪ್ರಾರಂಭಿಸಬೇಕು. ಮಳೆಗಾಲದ ಪೂರ್ವದಲ್ಲಿ ಸ್ಥಳೀಯಾಡಳಿತ ಮುನ್ನೆಚ್ಚರಿಕಾ ಕ್ರಮಕೈಗೊಂಡು ಮಳೆಗಾಲದಲ್ಲಿ ಎದುರಾಗಬಹುದಾದ ಸಂಭಾವ್ಯ ತೊಂದರೆ ತಡೆಗಟ್ಟಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕುಂದಾಪುರ ಪುರಸಭೆಯಿಂದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛಗೊಳಿಸುವುದು ಸಹಿತ ಹಲವು ಮುನ್ನೆಚ್ಚರಿಕೆ ಕಾರ್ಯ ಆರಂಭಿಸಲಾಗಿದೆ. ಪ್ರಮುಖ ಚರಂಡಿ ಹಾಗೂ ತೋಡುಗಳ ಸ್ವಚ್ಛತೆ, ಹೂಳೆತ್ತುವ ಬಗ್ಗೆ ಕ್ರಮಕೈಗೊಳ್ಳಲಾಗಿದ್ದು, ಪುರಸಭೆಯಲ್ಲಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಚರಂಡಿ ಸ್ವಚ್ಛತೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಮೂರು ತಿಂಗಳಿಗಾಗಿ 20 ಜನ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಮೋಹನದಾಸ ಶೆಣೈ, ಅಧ್ಯಕ್ಷರು, ಪುರಸಭೆ ಕುಂದಾಪುರ https://www.vijayavani.net/district-administration-does-injustice-to-the-grieving-family https://www.vijayavani.net/shivapura-nagabrahmalingeshwara-sanndhi-re-established