

ಚಿಕ್ಕಬಳ್ಳಾಪುರ: ಮಳೆ ಹಾನಿಗೆ ತ್ವರಿತ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಕೈಗೊಂಡಿದ್ದ ಮಳೆಹಾನಿ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೇ.13 ರಿಂದ ಮೇ.19 ರವರೆಗೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗಿರುವುದರಿಂದ ವಿವಿಧೆಡೆ ಮನೆಗಳು ಬಿದ್ದು ಹೋಗಿವೆ. ಜೀವ ಹಾನಿಯೂ ಸಂಭವಿಸಿದೆ. ಇದರ ಬಗ್ಗೆ ತುರ್ತು ವರದಿಯನ್ನು ಸಲ್ಲಿಸುವುದರ ಜತೆಗೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಪ್ರತಿದಿನ ಮಳೆ ಹಾನಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಆಯಾ ದಿನವೇ ವರದಿಯನ್ನು ಸಲ್ಲಿಸಲು, ರ್ನಿಲಕ್ಷ$್ಯ ತೋರಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಸೂಚಿಸಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಮಳೆಯಾಗುತ್ತಿದ್ದರೂ ಸಹ ಕೆಲವು ವಾರ್ಡುಗಳು ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ. ಟಿ ನಿಟ್ಟಾಲಿ ಮತ್ತಿತರರು ಇದ್ದರು.
ಬಾಕ್ಸ್
ಮಳೆಯಿಂದ ಹಾನಿ
ಇತ್ತೀಚಿನ ಮಳೆಯಿಂದಾಗಿ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ 7, ಬಾಗೇಪಲ್ಲಿ ಮತ್ತು ಚೇಳೂರು ತಾಲೂಕಿನಲ್ಲಿ ತಲಾ 2, ಗುಡಿಬಂಡೆ, ಶಿಡ್ಲಘಟ್ಟ ತಾಲೂಕುಗಳಲ್ಲಿ ತಲಾ 1 ಸೇರಿದಂತೆ 13 ಮನೆಗಳು ಹಾನಿಗೊಂಡಿದ್ದು ಇದರಲ್ಲಿ 11 ಮನೆಗಳು ಭಾಗಶ@ ಹಾಗೂ ಎರಡು ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಬಾಗೇಪಲ್ಲಿ ತಾಲೂಕಿನಲ್ಲಿ 10 ಕುರಿಗಳು,ಗೌರಿಬಿದನೂರು ತಾಲೂಕಿನಲ್ಲಿ ಒಂದು ಕುರಿ ಮೃತಪಟ್ಟಿವೆ. ಚಿಂತಾಮಣಿ ತಾಲೂಕಿನಲ್ಲಿ 8.5 ಎಕರೆ ಮಾವಿನ ತೋಟ ಹಾಗೂ ಅರ್ಧ ಎಕರೆ ಚೆಂಡೂ ಹೂವಿನ ತೋಟ ಹಾಳಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.