ಮುಂಗಾರು ಪೂರ್ವ ಧಾರಾಕಾರ ಮಳೆ, ಕೃಷಿ ಭೂಮಿ ಹದ ಕಾರ್ಯ ಪ್ರಾರಂಭ

22cbp3.jpg
Published on

ಚಿಕ್ಕಬಳ್ಳಾಪುರ:ಮುಂಗಾರು ಪೂರ್ವ ಧಾರಾಕಾರ ಮಳೆಯ ನಡುವೆ ಜಿಲ್ಲೆಯ ವಿವಿಧೆಡೆ ರೈತರು ಮೊದಲ ಹಂತದ ಭೂಮಿ ಹದ ಮಾಡುವ ಕಾರ್ಯ ಚುರುಕು ಪಡೆಯುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆ ಸೇರಿದಂತೆ 1,32,175 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಈ ಬಾರಿ ವರುಣರಾಯ ಕೃಪೆ ಚೆನ್ನಾಗಿ ಇದೆ. ಮುಂಗಾರು ಪೂರ್ವದಲ್ಲಿಯೇ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿದಿದ್ದು ಬೆಳಿಗ್ಗೆ ಸುಡು ಬಿಸಿಲು, ಸಂಜೆ ಬಹುತೇಕ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಮಳೆಯ ಬಿಡುವಿನ ಹಿನ್ನೆಲೆಯಲ್ಲಿ ಭೂಮಿ ಹದ ಕಾರ್ಯವು ಸುಗಮವಾಗಿ ನಡೆಯುತ್ತಿದೆ. ಜೋಡೆತ್ತುಗಳು ಇಲ್ಲವೇ ಯಂತ್ರೋಪಕರಣಗಳ ಮೂಲಕ ಮೊದಲ ಹಂತದಲ್ಲಿ ಉಳುಮೆ ಕಾರ್ಯ ಕೈಗೊಳ್ಳುತ್ತಿದ್ದು ಇದು ಎರಡ್ಮೂರು ಮುಂದುವರೆಯಲಿದೆ. ಹಾಗೆಯೇ ಮಳೆಗೆ ಬಿಟ್ಟು ಮಣ್ಣಿನ ಅಗತ್ಯ ತೇವಾಂಶ ಕಂಡು ಬಂದಾಗ ಬಿತ್ತನೆ ಕಾರ್ಯ ಕೈಗೊಳ್ಳಲಾಗುತ್ತದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

*ಪರಿಕರಗಳ ವಹಿವಾಟು
ಮುಂಗಾರು ಅವಧಿ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಇರುವ ಕೃಷಿ ಪರಿಕರಗಳ ಅಂಗಡಿಗಳ ವಹಿವಾಟು ಸಹ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕಳನಾಶಕಗಳು ಹಾಗೂ ಔಷಧ ಸಿಂಪಡಣೆಯ ಯಂತ್ರೋಪಕರಣಗಳು, ಉಳುಮೆಯ ಟ್ರಾ$್ಯಕ್ಟರ್ಗಳ ಬಳಕೆಯ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ರೈತರು ರಸಗೊಬ್ಬರ ಮಾರಾಟ ಅಂಗಡಿಗಳನ್ನು ಸಂಪರ್ಕಿಸಿ, ಬೆಳೆ ಬೆಳೆಯವುದರ ಬಗ್ಗೆ ಚರ್ಚಿಸುತ್ತಿದ್ದಾರೆ. ಕೃಷಿ ತಜ್ಞರಿಂದಲೂ ಸಲಹೆಗಳನ್ನು ಸ್ವೀಕರಿಸುತ್ತಿದ್ದಾರೆ. ಇದರ ನಡುವೆ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ರಾಸಾಯಾನಿಕ ಔಷಧಗಳು, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ಲಾಭದ ವಿಚಾರವಾಗಿ ಮಾರಾಟಗಾರರು ಕೃಷಿಕರನ್ನು ಸೆಳೆದು, ಉತ್ತಮ ವಹಿವಾಟು ನಡೆಸಲು ಮುಂದಾಗಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net