ಮತ ಎಣಿಕೆ ಕಾರ್ಯ ಸಮರ್ಪಕವಾಗಿರಲಿ

Meeting
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮತ ಎಣಿಕೆ ಪೂರ್ವಭಾವಿ ಸಭೆಯಲ್ಲಿ ಹಿತೇಶ್​ ಕೆ. ಕೋಯಲ್​ ಮಾತನಾಡಿದರು. ಡಾ. ಕೆ.ವಿದ್ಯಾಕುಮಾರಿ, ಅರುಣಕುಮಾರ್​ ಕೆ., ಮಮತಾದೇವಿ ಜಿ.ಎಸ್​., ರಶ್ಮಿ ಎಸ್​. ಹಾಗೂ ವಿವಿಧ ಅಧಿಕಾರಿಗಳು ಇದ್ದರು.
Published on

ವೀಕ್ಷಕ ಹಿತೇಶ್​ ಕೋಯಲ್​ ಸೂಚನೆ | ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ

ಉಡುಪಿ: ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಬಾರದು. ಸಮರ್ಪಕವಾಗಿ ಮತ ಎಣಿಕೆ ಕಾರ್ಯ ನಡೆಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೀಕ್ಷಕ ಹಿತೇಶ್​ ಕೆ. ಕೋಯಲ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಸಿದ್ಧತೆಯ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಹಸ್ಯ ಕಾಯ್ದುಕೊಳ್ಳಿ

ಮತ ಎಣಿಕೆ ಜೂ. 4ರಂದು ನಗರದ ಸೇಂಟ್​ ಸಿಸಿಲೀಸ್​ ದ್ಯಾ ಸಂಸ್ಥೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ. ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಲೋಪದೋಷ ಆಗದಂತೆ ನೋಡಿಕೊಳ್ಳಬೇಕು. ಪ್ರಜಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಮತದಾನದ ರಹಸ್ಯ ಕಾಯ್ದುಕೊಳ್ಳಬೇಕು. ಪ್ರತಿ ಮತಯಂತ್ರದ ಎಣಿಕೆಯಾದ ತಕ್ಷಣ ನಿಗದಿತ ನಮೂನೆಯಲ್ಲಿ ನಿಖರವಾಗಿ ಅಂಕಿ-ಅಂಶ ಬರೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಮತ ಎಣಿಕೆ ಕೇಂದ್ರದಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅರುಣಕುಮಾರ್​ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಸಹಾಯಕ ಚುನಾವಣಾ ಅಧಿಕಾರಿ ರಶ್ಮಿ ಎಸ್​. ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಠಡಿಯೊಳಗೆ ಮೊಬೈಲ್​ ಬಳಕೆ ನಿಷೇಧ

ಏಜೆಂಟರು ಕೇವಲ ಪೆನ್​, ನೋಟ್​ಪ್ಯಾಡ್​ ಮತ್ತು ಮತದಾನದ ದಿನದಂದು ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿ ತರಲು ಮಾತ್ರ ಅವಕಾಶ ನೀಡಬೇಕು. ಮತ ಎಣಿಕೆ ಕೇಂದ್ರದಲ್ಲಿ ಟೇಬಲ್​ಗಳ ಸುತ್ತಲೂ ಹಾಕಿರುವ ವೈರ್​ ಮೆಷ್​ ದಾಟಿ ಹೋಗಲು ಅವಕಾಶ ಕೊಡಬಾರದು. ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಅಂದು ಬೆಳಗ್ಗೆ 5 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರತಕ್ಕದ್ದು. ಉಪಹಾರ ಮುಗಿಸಿ 7 ಗಂಟೆಯೊಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರಬೇಕು. ಮತ ಎಣಿಕೆ ಕೊಠಡಿಯೊಳಗೆ ಮೊಬೈಲ್​ ಬಳಸುವಂತಿಲ್ಲ. ಮತ ಎಣಿಕೆ ಕೊಠಡಿಯೊಳಗೆ ಮತ ಎಣಿಕೆ ಸಿಬ್ಬಂದಿ, ಏಜೆಂಟ್​, ಅಭ್ಯರ್ಥಿ ಹೊರತುಪಡಿಸಿ ಅನಾವಶ್ಯಕವಾಗಿ ಯಾರ ಪ್ರವೇಶಕ್ಕೂ ಅನುಮತಿ ನೀಡಬಾರದು ಎಂದು ಹಿತೇಶ್​ ಕೆ. ಕೋಯಲ್​ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net