87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ 87 ಪುಸ್ತಕ ಪ್ರಕಟ: ದಾಖಲೆ ಬರೆಯಲು ಸಜ್ಜಾಗಿರುವ ಕಸಾಪ..!

Pre meeting of Kasapa Sammelan mandya
Published on

ಮಂಡ್ಯ: ಮುಂಬರುವ ತಿಂಗಳಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಯಾಗಲಿದೆ. ಅಂತೆಯೇ ಈ ಬಾರಿಯ ಸಮ್ಮೇಳನದಲ್ಲಿ 87 ಪುಸ್ತಕವನ್ನು ಪ್ರಕಟಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಷಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪುಸ್ತಕ ಪ್ರಕಟಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 87 ಪುಸ್ತಕಗಳ ಪೈಕಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಅತಿ ಮುಖ್ಯವಾದ ಕೆಲವು ಪುಸ್ತಕಗಳನ್ನು ಮರು ಮುದ್ರಣ ಮಾಡಲಾಗುವುದು. ಇದರ ಜತೆಗೆ ಮಂಡ್ಯಕ್ಕೆ ಸೀಮಿತವಾದ ವಿಷಯಗಳನ್ನಿಟ್ಟುಕೊಂಡು ಜಿಲ್ಲೆಯ ಸಾಹಿತಿಗಳು, ಲೇಖಕರಿಂದ 50ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಸತಾಗಿ ರಚಿಸಲು ಪ್ರಕಟಣಾ ಸಮಿತಿ ರೂಪುರೇಷೆ ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಪ್ರವಾಸಿ ತಾಣ, ಸಾಂಸ್ಕೃತಿಕ ಕೇಂದ್ರ, ದೇಶಕ್ಕಾಗಿ ಪ್ರಾಣ ಕೊಟ್ಟ ಹುತಾತ್ಮರು, ಸಾರಸ್ವತ ಲೋಕ ಕಟ್ಟಿದವರು, ಜಿಲ್ಲೆಯ ಸಾಧಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಕರ್ನಾಟಕ ಏಕೀಕರಣ, ಕೃಷ್ಣರಾಜಸಾಗರ(ಕನ್ನಂಬಾಡಿ), ಏಳು ತಾಲೂಕು ದರ್ಶನ, ಸಾಂಸ್ಕೃತಿಕ ಕೇಂದ್ರ, ಜಿಲ್ಲೆಯ ವಾಸ್ತುಶಿಲ್ಪ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ದಾರಿ ತೋರಿದ ದಾರ್ಶನಿಕರು, ನಾಡು ಕಟ್ಟಿದವರ ವಿಷಯಗಳೂ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ 80 ರಿಂದ 100 ಪುಟಗಳ ಒಳಗಿನ ಪುಸ್ತಕಗಳನ್ನು ಹೊರ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಈ ಪುಸ್ತಕಗಳನ್ನು ಜನಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಅರ್ಥವಾಗುವ ಭಾಷಾ ಶೈಲಿಯಲ್ಲಿ ರಚಿಸಲಾಗುವುದು. ಪುಸ್ತಕಗಳನ್ನು ರಚಿಸುವ ಆಸಕ್ತಿಯುಳ್ಳ ಲೇಖಕರಿಗೆ ಅವಕಾಶ ನೀಡಬೇಕಾಗಿದ್ದು, ಆಯಾ ಕ್ಷೇತ್ರದಲ್ಲಿ ಪರಿಣತಿ, ತಿಳವಳಿಕೆ, ಆಸಕ್ತಿ ಇರುವವರನ್ನು ಸಾಮಾಜಿಕ, ಪ್ರಾದೇಶಿಕ ಮತ್ತು ಪ್ರತಿಭಾ ನ್ಯಾಯದ ಆಧಾರದ ಮೇಲೆ ಲೇಖಕರನ್ನು ಆಯ್ಕೆ ಮಾಡಿ. ಅಂತೆಯೇ ಕಾಲಮಿತಿಯೊಳಗೆ ಪುಸ್ತಕ ರಚಿಸಿ ಕೊಡಲು ಬದ್ಧತೆ ಇರುವವರ ಹೆಸರನ್ನು ಮುಂದಿನ ಸಭೆಯೊಳಗೆ ಸೂಚಿಸಬೇಕೆಂದು ಸಮಿತಿ ಸದಸ್ಯರಿಗೆ ತಿಳಿಸಿದರು.

ಸಮಿತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಿ ಪುಸ್ತಕ ರಚಿಸಲು ಅವಕಾಶ ಮಾಡಿಕೊಡಲಾಗುವುದು. ಬಿಡುಗೆಯಾಗುವ ಈ ಪುಸ್ತಕಗಳು ಮೌಲಿಕ ಹಾಗೂ ಆಕರ ಗ್ರಂಥ ಆಗುವ ರೀತಿಯಲ್ಲಿರಬೇಕು. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅದ್ಭುತ ಯಶಸ್ಸು ಕಂಡ ನಂತರ ಮಂಡ್ಯದಲ್ಲಿ ನಡೆಯುವ 87ನೇ ಸಮ್ಮೇಳನದ ಕುರಿತು ಕನ್ನಡಿಗರಲ್ಲಿ ಅಪಾರ ನಿರೀಕ್ಷೆ ಮತ್ತು ಕುತೂಹಲ ಇದೆ. ಈ ನಿಟ್ಟಿನಲ್ಲಿ ಇದೊಂದು ಮಾರ್ಗದರ್ಶಿ ಸಮ್ಮೇಳನವಾಗಬೇಕು. ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರೀಕೃತವಾಗಿ ಇರುವ ಕನ್ನಡಿಗರ ಜನ ಸಾಮಾನ್ಯರ ಪರಿಷತ್ ಇದಾಗಿದೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಹಾವೇರಿಯಲ್ಲಿ ನಡೆದ 86 ನೇ ಸಮ್ಮೇಳನಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಡೆಸಲಾಗುವುದು. ಮಂಡ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಪುಸ್ತಕಗಳು ಸಾರ್ವಕಾಲಿಕವಾಗಿ ಉಳಿಯುವಂತೆ ಮಾಡಲು ಪುಸ್ತಕ ಸಮಿತಿ ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಘನತೆ ಹೆಚ್ಚಿಸುವ ರೀತಿಯಲ್ಲಿ ಎಲ್ಲರೂ ಸಮ್ಮೇಳನ ನಡೆಸೋಣ ಎಂಬ ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಚಂದ್ರಲಿಂಗು, ಪೂರ್ಣಚಂದ್ರ, ಸಮಿತಿ ಸದಸ್ಯರಾದ ಸುಮಾರಾಣಿ ಶಂಭು, ಭವಾನಿ ಲೋಕೇಶ್, ಶುಭಶ್ರೀ ಪ್ರಸಾದ್, ಎಂ.ಯು.ಶ್ವೇತಾ, ಷೌಕತ್ ಆಲಿ, ಚಲುವೇಗೌಡ, ಚಂದ್ರಶೇಖರಯ್ಯ, ಡಾ.ಶಿವಣ್ಣ, ಕೊತ್ತತ್ತಿ ರಾಜು, ಹರಿಚರಣತಿಲಕ್, ಧರ್ಮಪ್ಪ, ಬಸಪ್ಪ ನೆಲಮಾಕನಹಳ್ಳಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net