ರೇಷ್ಮೆ, ದ್ರಾಕ್ಷಿ, ಹೂವು, ತರಕಾರಿ, ಹೈನುಗಾರಿಕೆಗೆ ಹೆಸರಾಗಿರುವ ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ 3, ಜೆಡಿಎಸ್, ಬಿಜೆಪಿಯ ತಲಾ ಒಬ್ಬರು ಶಾಸಕರಿದ್ದಾರೆ. ಮೊದಲಿನಿಂದಲೂ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕೈ ಪಾಳಯದ ಗುರಿ. ಮತ್ತೊಂದೆಡೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೂತ್ ಮಟ್ಟದ ಸಂಘಟನೆ ಬಿಜೆಪಿ ಮತ್ತು ಜೆಡಿಎಸ್ ಬಲ ಹೆಚ್ಚಿಸಿದೆ. ಮೊದಲು ಕ್ಷೇತ್ರದ ಸಮಸ್ಯೆಗಳು, ಜನಪರ ವಿಚಾರವಾಗಿ ನಿರಂತರ ಹೋರಾಟ ಮತ್ತು ಪಕ್ಷದ ನೊಗ ಹೊತ್ತ ನಾಯಕರು ಚುನಾವಣಾ ಅಭ್ಯರ್ಥಿಗಳಾಗುತ್ತಿದ್ದರು. ಆದರೆ, ಕಳೆದ 2 ಚುನಾವಣೆಗಳಿಂದಲೂ ಕೊಡುಗೈ ದಾನಿಗಳು, ಸಮಾಜಸೇವಕರು ಅಖಾಡಕ್ಕಿಳಿದು, ವೈಯಕ್ತಿಕ ವರ್ಚಸ್ಸಿನಲ್ಲಿ ಜನಪ್ರತಿನಿಧಿಗಳಾಗುತ್ತಿರುವುದು ರಾಜಕೀಯ ಚಿತ್ರಣ ಬದಲಾಯಿಸುತ್ತಿದೆ. ಈ ತಂತ್ರಗಾರಿಕೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಚಿಂತಾಮಣಿಯಲ್ಲಿ ವರ್ಕೌಟ್ ಆಗಿದೆ. ಇದೀಗ ಗೌರಿಬಿದನೂರು ಮತ್ತು ಶಿಡ್ಲಘಟ್ಟದಲ್ಲೂ ಸೇವಾ ಚಟುವಟಿಕೆಯಲ್ಲಿ ತೊಡಗಿರುವ ನಾಯಕರಿಗೇನೂ ಕಡಿಮೆ ಇಲ್ಲ. ಈಗಾಗಲೆ ಕಾಂಗ್ರೆಸ್ (ಚಿಕ್ಕಬಳ್ಳಾಪುರ ಹೊರತುಪಡಿಸಿದಂತೆ) ಮತ್ತು ಜೆಡಿಎಸ್ ಅಭ್ಯರ್ಥಿಗಳ ಹೆಸರು ಸ್ಪಷ್ಟವಾಗಿದೆ. ಬಿಜೆಪಿಯಲ್ಲಿ ಬಹುತೇಕ ಕಡೆ ಖಚಿತವಾಗದಿದ್ದರೂ ಸಚಿವ ಡಾ.ಕೆ. ಸುಧಾಕರ್ ಪ್ರಭಾವದಿಂದಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.