

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಕಂಡ ಅಭ್ಯರ್ಥಿಗಳು ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಿಗುವ ಅನೇಕ ಪ್ರೋತ್ಸಾಹ ಧನ ಹಾಗೂ ಸೌಲಭ್ಯಗಳ ಬಗ್ಗೆ ತಿಳಿಸಿ ಅರ್ಹರಿಗೆ ಈ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ಟೌನ್ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಹೊಸಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳ ಚುನಾವಣೆ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು. ಚುನಾವಣೆ ಇದೇ ಮೊದಲ ಭಾರಿಗೆ ನಡೆಯುತ್ತಿಲ್ಲ ಬದಲಿಗೆ ಹಲವು ಭಾರಿ ನಡೆದಿದೆ ಅನೇಕರು ಗೆದ್ದು ಸೋತಿದ್ದಾರೆ ಆದರೆ ಸಹಕಾರ ಸಂಘಗಳಿಂದ ಜನಸಾಮಾನ್ಯರಿಗೆ ದೊರೆಯಬೇಕಾಗ ಅನುಕೂಲಗಳ ಬಗ್ಗೆ ತಿಳಿಸಿದ್ದು ಕೆಲವರು ಮಾತ್ರ ಎಂದು ಹೇಳಿದರು.
ಮನಸ್ಥಾಪ ಬಿಟ್ಟು ಕೆಲಸ ಮಾಡಬೇಕು: ಸಾಮಾನ್ಯ ಹಾಗೂ 2ಎ ಸೇರಿ ವಿವಿಧ ಸ್ಥಾನಗಳಿಗೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಎಲ್ಲರನ್ನು ಆಯ್ಕೆ ಮಾಡುವ ಮೂಲಕ ಸೌಲಭ್ಯ ದೊರಕಿಸಿಕೊಡುವ ಅವಕಾಶ ಕಲ್ಪಿಸಿಕೊಡಬೇಕು ಎಂದುಬಮೂಲ್ ನಿರ್ದೇಶಕ ದೊಡ್ಡಹುಲ್ಲೂರು ಸಿ.ಮಂಜುನಾಥ್ ಹೇಳಿದರು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ನಮ್ಮ ನಾಯಕರು ಪರಾಭವಗೊಳ್ಳುವಂತಾಯಿತು. ಅಂದು ಯಾವ ತಪ್ಪು ನಡೆದಿದೆ ಎಂಬುದು ಎಲ್ಲ ನಾಯಕರು ಅರಿತು ಈ ಚುನಾವಣೆಯಲ್ಲಿ ಅದನ್ನು ಮರುಕಳಿಸದಂತೆ ಜಯಭೇರಿ ಭಾರಿಸುವತ್ತ ಗಮನಹರಿಸಬೇಕು. ಸ್ಥಳೀಯ ಮುಖಂಡರು ಮೊದಲು ಮನಸ್ಥಾಪ ಬಿಟ್ಟು ಒಗ್ಗಟ್ಟಿನಿಂದ ಚುನಾವಣೆಗಳನ್ನು ಎದುರಿಸಬೇಕು. ಮುಂದಿನ ದಿನಗಳಲ್ಲಿ ಟೌನ್ ಬ್ಯಾಂಕ್, ನಗರಸಭೆ ಸೇರಿವಿವಿಧ ಚುನಾವಣೆಗಳು ಸಹ ಎದುರಾಗಲಿದೆ ಅದರಲ್ಲೂ ನಮ್ಮ ಪ್ರಾಬಲ್ಯ ಮೆರೆಯಬೇಕು ಎಂದು ಮನವಿ ಮಾಡಿದರು.