ಕಡಲತಡಿ ಕೈ-ಕಮಲ ಕಾಳಗ..

District
Published on
ಕರಾವಳಿಯಲ್ಲಿ ಎದ್ದಿದ್ದ ಹಿಂದುತ್ವದ ಅಲೆಯಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ್ದ ಬಿಜೆಪಿಯು ಮುಂಬರುವ ಚುನಾವಣೆಯಲ್ಲಿ ಆ ಸ್ಥಾನಗಳನ್ನು ಉಳಿಸಿಕೊಳ್ಳುವ ಉಮೇದಿನಲ್ಲಿದೆ. ಕಳೆದುಕೊಂಡ ಕ್ಷೇತ್ರಗಳನ್ನು ಮರಳಿ ಕಬಳಿಸಲು ಕಾಂಗ್ರೆಸ್ ಹವಣಿಸುತ್ತಿದೆ. ಜೆಡಿಎಸ್​ಗೆ ನೆಲೆಯಿಲ್ಲ. ಇದು ಉತ್ತರ ಕನ್ನಡ ಜಿಲ್ಲೆಯ ಸದ್ಯದ ರಾಜಕೀಯ ಚಿತ್ರಣ. ಜಿಲ್ಲೆಯ 6ರಲ್ಲಿ 4 ಕ್ಷೇತ್ರಗಳನ್ನು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದ ಕಮಲ ಪಡೆ ಬಲ ಶಿವರಾಮ ಹೆಬ್ಬಾರ್ ಪಕ್ಷ ಸೇರ್ಪಡೆಯಿಂದ 5 ಕ್ಕೇರಿದೆ. ಕಾಂಗ್ರೆಸ್ ಒಂದು ಕ್ಷೇತ್ರಕ್ಕೆ ಸೀಮಿತವಾಗಿದೆ. ದಶಕಗಳಿಂದ ಗೆಲ್ಲುತ್ತ ಬಂದಿದ್ದ ಎಂಎಲ್​ಸಿ ಸ್ಥಾನವನ್ನೂ ಈ ಬಾರಿ ಬಿಜೆಪಿಗೆ ಬಿಟ್ಟುಕೊಟ್ಟು ಕೈ ಪಾಳಯ ಬಡವಾಗಿದೆ. ಈಗಾಗಲೆ ಎಲ್ಲ ಪಕ್ಷಗಳಲ್ಲೂ ಟಿಕೆಟ್ ಟಾಕ್ ಶುರುವಾಗಿದ್ದು, ಆಕಾಂಕ್ಷಿಗಳು ತಮ್ಮದೇ ಶೈಲಿಯಲ್ಲಿ ತಯಾರಿ ಆರಂಭಿಸಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿ ನೋಡುವುದಾದರೆ, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಆದರೆ, ಪ್ರತಿ ಕ್ಷೇತ್ರದಲ್ಲೂ ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡು ಸವಾಲಾಗಿದೆ. ಜತೆಗೆ ಬಂದರುಗಳ ನಿರ್ವಣಕ್ಕೆ ವಿರೋಧ, ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್​ಗಾಗಿ ಹೋರಾಟ, ಅರಣ್ಯ ಹಾಗೂ ಅತಿಕ್ರಮಣ ಸಂಬಂಧಿ ಸಮಸ್ಯೆ ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ವೈಯಕ್ತಿಕವಾಗಿ ಚುನಾವಣೆ ತಯಾರಿ ನಡೆಸಿದ್ದರೂ ಪಕ್ಷದ ಸಮಗ್ರ ಸಂಘಟನೆ ವ್ಯವಸ್ಥಿತವಾಗಿ ಆಗುತ್ತಿಲ್ಲ ಎಂಬ ಕೊರಗು ಕಾರ್ಯಕರ್ತರಲ್ಲೇ ಇದೆ.

| ಸುಭಾಸ ಧೂಪದಹೊಂಡ ಕಾರವಾರ

ದೇಶಪಾಂಡೆಗೆ ಶಿಷ್ಯನದ್ದೇ ಸವಾಲು

ಕಾಂಗ್ರೆಸ್​ನ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಪ್ರತಿನಿಧಿಸುವ ಕ್ಷೇತ್ರ ಹಳಿಯಾಳ. ಅವರು ಇದೇ ಕ್ಷೇತ್ರದಿಂದ 8 ಬಾರಿ ಜಯಗಳಿಸಿ, ವಿಧಾನಸಭೆಯ ಅತಿ ಹಿರಿಯ ಸದಸ್ಯ ಎನಿಸಿಕೊಂಡಿದ್ದಾರೆ. ಈ ಬಾರಿಯೂ ಕೈ ಟಿಕೆಟ್ ಆಕಾಂಕ್ಷಿಯಾಗಿರುವ ಆರ್​ವಿಡಿಗೆ ಅವರ ಶಿಷ್ಯ ಮಾಜಿ ಎಂಎಲ್​ಸಿ ಶ್ರೀಕಾಂತ ಎಲ್.ಘೋಟ್ನೇಕರ್ ಮಗ್ಗಲು ಮುಳ್ಳಾಗಿದ್ದಾರೆ. ಬಹಿರಂಗವಾಗಿ ದೇಶಪಾಂಡೆ ವಿರುದ್ಧ ತೊಡೆ ತಟ್ಟಿರುವ ಘೋಟ್ನೇಕರ್, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಕ್ಷೇತ್ರದ ಬಹುಸಂಖ್ಯಾತ ಮರಾಠ ಸಮುದಾಯವನ್ನು ಒಗ್ಗೂಡಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಕಡೆಗೂ ಕಣ್ಣಿಟ್ಟಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಸುನೀಲ ಹೆಗಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡುತ್ತಾ ಸ್ವಸಾಮರ್ಥ್ಯ ಹೆಚ್ಚಿಸಿಕೊಂಡು ಚುನಾವಣೆಗೆ ಸಿದ್ಧವಾಗುತ್ತಿದ್ದಾರೆ.

ಭಟ್ಕಳದ ಮಲ್ಲಿಗೆ ಯಾರ ಮುಡಿಗೆ?

ಮಲ್ಲಿಗೆ ಹಾರಕ್ಕೆ ಹೆಸರಾದ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸುನೀಲ ನಾಯ್ಕ ಮತ್ತೊಮ್ಮೆ ಕಮಲ ಟಿಕೆಟ್ ಆಕಾಂಕ್ಷಿ. ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಈಶ್ವರ ನಾಯ್ಕ, ವಿನೋದ ನಾಯ್ಕ ಹೀಗೆ ಪರ್ಯಾಯ ಆಕಾಂಕ್ಷಿಗಳೂ ಇದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಮಂಕಾಳ ವೈದ್ಯ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ಸಂಘಟನೆ ದುರ್ಬಲವಾಗಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರದಲ್ಲಿ ತಂಜೀಂ ಎಂಬ ಮುಸ್ಲಿಂ ಸಂಘಟನೆಯ ಬೆಂಬಲವೂ ಸೋಲು, ಗೆಲುವು ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಾಗೇರಿ ಎದುರಿಸುವರೇ ಭೀಮಣ್ಣ?

ಅಡಕೆ ಬೆಳೆಗಾರರ ನಾಡು ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ಹಾಗೂ ಇನ್ನೂ ಕೆಲವರು ಕಮಲ ನಾಯಕರು ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಹಾಲಿ ಶಾಸಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಪಕ್ಷದ ಅಭ್ಯರ್ಥಿಯಾಗುವುದು ನಿಶ್ಚಿತ. ನಿರಂತರ 6 ಬಾರಿ ಗೆದ್ದ ಕಾಗೇರಿಯನ್ನು ಮಣಿಸಲು ಕಾಂಗ್ರೆಸ್ ಸೂಕ್ತ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಸತತ ಸೋಲಿನಿಂದ ಬಸವಳಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮತ್ತೊಮ್ಮೆ ಶಿರಸಿಯಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಅಲ್ಲದೆ, ಕೈ ಪಾಳಯದ ಸ್ಥಳೀಯ ಮರಿನಾಯಕರೂ ಟಿಕೆಟ್ ಪ್ರಯತ್ನದಲ್ಲಿದ್ದಾರೆ. ಜೆಡಿಎಸ್​ನಲ್ಲಿರುವ ಶಶಿಭೂಷಣ ಹೆಗಡೆ ಅವರನ್ನು ಕಾಂಗ್ರೆಸ್​ಗೆ ಕರೆಸಿ ಟಿಕೆಟ್ ಕೊಡಿಸುವ ಪ್ರಯತ್ನಗಳೂ ನಡೆದಿವೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದರ ಮೇಲೆ ಶಿರಸಿಯ ಕಣ ಚಿತ್ರಣ ಸ್ಪಷ್ಟವಾಗಲಿದೆ.

ಕಾರವಾರದಲ್ಲಿ ಬಿಜೆಪಿ ಮೇಲೆ ಎಲ್ಲರ ಕಣ್ಣು

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಹಾಲಿ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕ ಮತ್ತೊಮ್ಮೆ ಅಭ್ಯರ್ಥಿಯಾಗಬಯಸಿದ್ದಾರೆ. ಅದಕ್ಕಾಗಿ ಪಕ್ಷ ಸಂಘಟನೆ, ಚುರುಕಿನ ಕಾರ್ಯವನ್ನೂ ನಡೆಸಿ ದ್ದಾರೆ. ವಿಚಿತ್ರ ಎಂದರೆ ಎದುರಾಳಿ ಇಬ್ಬರೂ ಅಭ್ಯರ್ಥಿಗಳು ಅದೇ ಪಕ್ಷದ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ಆನಂದ ಅಸ್ನೋಟಿಕರ್ ಜೆಡಿಎಸ್​ನಲ್ಲಿದ್ದರೂ ಪಕ್ಷ ಸಂಘಟನೆಯಲ್ಲಿ ತೊಡಗಿಲ್ಲ. ಜನಸಂಪರ್ಕದಿಂದ ದೂರವೇ ಇದ್ದು, ಬಿಜೆಪಿ ಸೇರುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್​ನಲ್ಲಿರುವ ಮಾಜಿ ಶಾಸಕ ಸತೀಶ್ ಸೈಲ್ ಕೂಡ ಬಿಜೆಪಿ ನಾಯ ಕರ ಮನೆ ಬಾಗಿಲು ತಟ್ಟಿ ಬಂದಿದ್ದಾರೆ. ಆದರೆ, ಸಮರ್ಪಕ ಸ್ಪಂದನೆ ದೊರೆಯದ ಕಾರಣ ಕಾಂಗ್ರೆಸ್​ನಲ್ಲೇ ಮುಂದುವರಿದಿದ್ದರೂ ಪಕ್ಷ ಸಂಘಟನೆಯತ್ತ ಆಸಕ್ತಿ ತೋರಿಲ್ಲ. ಒಟ್ಟಾರೆ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದೇ ಕ್ಷೇತ್ರದ ಜನರಿಗಿರುವ ಗೋಜಲು.

ಹೆಬ್ಬಾರ್​ಗೆ ಪಾಟೀಲ್ ಟಕ್ಕರ್?

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೆದ್ದು, ನಂತರ ಪಕ್ಷಾಂತರ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿಯಿಂದ ಶಾಸಕರಾಗಿ ಸಚಿವರೂ ಆಗಿರುವ ಶಿವರಾಮ ಹೆಬ್ಬಾರ್, ಈ ಬಾರಿ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಕಮಲ ಟಿಕೆಟ್ ಆಕಾಂಕ್ಷಿ. ಕಳೆದ ಸಲ ಹೆಬ್ಬಾರ್​ರನ್ನು ಬಿಜೆಪಿಯಿಂದ ಎದುರಿಸಿ ಸೋತಿದ್ದ ಹಾಲಿ ಎನ್​ಡಬ್ಲ್ಯುಕೆಆರ್​ಟಿಸಿ ಅಧ್ಯಕ್ಷ ವಿ.ಎಸ್.ಪಾಟೀಲ್ ಕೂಡ ಅದೇ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಮಲ ಟಿಕೆಟ್ ಸಿಗದೇ ಇದ್ದರೆ ಕಾಂಗ್ರೆಸ್ ಸೇರಿ ಹೆಬ್ಬಾರ್​ರನ್ನು ಎದುರಿಸುವ ತಯಾರಿಯಲ್ಲಿ ವಿ.ಎಸ್.ಪಾಟೀಲ್ ಇದ್ದಾರೆ. ಆರ್.ವಿ.ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಕೂಡ ಕ್ಷೇತ್ರದಲ್ಲಿ ಓಡಾಡಿಕೊಂಡು ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿದ್ದಾರೆ.

ಕುಮಟಾದಲ್ಲಿ ಮತ್ತೆ ಬೆಳಗುವರೇ ದಿನಕರ?

ತುರುಸಿನ ಪೈಪೋಟಿ ಚುನಾವಣೆಗೆ ಹೆಸರಾದ ವಿಧಾನಸಭಾ ಕ್ಷೇತ್ರ ಕುಮಟಾ-ಹೊನ್ನಾವರ. ಹಾಲಿ ಬಿಜೆಪಿ ಶಾಸಕ ದಿನಕರ ಶೆಟ್ಟಿ ಮತ್ತೊಮ್ಮೆ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ಅದೇ ಪಕ್ಷದಿಂದ 10ಕ್ಕೂ ಅಧಿಕ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ, ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಕಾಂಗ್ರೆಸ್​ನಲ್ಲೂ ಟಿಕೆಟ್ ಪೈಪೋಟಿ ಜೋರಾಗಿಯೇ ಇದೆ. ಮಾಜಿ ಶಾಸಕಿ ಶಾರದಾ ಶೆಟ್ಟಿ, ಅವರ ಪುತ್ರ ರವಿಕುಮಾರ ಶೆಟ್ಟಿ, ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ಆರ್.ಎಚ್.ನಾಯ್ಕ, ಧೀರೂ ಶಾನಭಾಗ, ಭಾಸ್ಕರ ಪಟಗಾರ, ಮಂಜುನಾಥ ನಾಯ್ಕ, ಹೀಗೆ ಆಕಾಂಕ್ಷಿಗಳ ದೊಡ್ಡ ಸರಣಿಯೇ ಇದೆ. ಇದೇ ಕೈ ಪಕ್ಷದ ಸಂಘಟನೆಗೆ ಸವಾಲಾಗಿದೆ. ಜೆಡಿಎಸ್​ನಿಂದ ಸೂರಜ್ ನಾಯ್ಕ ಸೋನಿ ಮಾತ್ರ ಆಕಾಂಕ್ಷಿ. ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net