

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗೆ. ಕಳೆದುಕೊಂಡಿದ್ದನ್ನು ಮರಳಿ ಪಡೆದು ಪುಟಿದು ನಿಲ್ಲುವ ತವಕ ಕಾಂಗ್ರೆಸ್ಗೆ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸಾಧ್ಯತೆಯಿರುವ ಎರಡು ಕ್ಷೇತ್ರದಲ್ಲಾದರೂ ನಗೆ ಬೀರುವ ಆಸೆ ಜೆಡಿಎಸ್ಗೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎನಿಸಿದರೂ ಬಾಗಿಲು ಸ್ವಲ್ಪ ಶಿಥಿಲಗೊಂಡಂತೆ ಕಾಣಿಸುತ್ತಿದೆ. ಜಿಲ್ಲೆಯ ಎಲ್ಲೆಡೆ ಖಾತೆ ತೆರೆಯುವ ಕನಸು ಈ ಬಾರಿಯೂ ಕಷ್ಟ. ಎರಡು ಕ್ಷೇತ್ರಗಳಲ್ಲಿ ಮುಖಂಡರ ನಡುವೆ ಉಂಟಾಗಿರುವ ಮನಸ್ತಾಪ ನಾಯಕರಿಗೆ ಬಿಸಿತುಪ್ಪ. ಕಳೆದ ಚುನಾವಣೆಯಲ್ಲಿ ಮೋದಿ ಫ್ಯಾಕ್ಟರ್ನಿಂದ ಭರ್ಜರಿ ಲೀಡ್ನಲ್ಲಿ ಗೆದ್ದಿದ್ದ ಬಿಜೆಪಿ ಶಾಸಕರು, ಈ ಬಾರಿ ಸಿಕ್ಕಾಪಟ್ಟೆ ಬೆವರು ಹರಿಸಬೇಕು. ಕಾಂಗ್ರೆಸ್ ಸ್ಥಿತಿಯೂ ಭಿನ್ನವಾಗಿಲ್ಲ. ಐದು ವರ್ಷ ಜಿಪಂನಲ್ಲಿ ಜೆಡಿಎಸ್ನೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಒಂದು ಲೋಕಸಭೆ ಉಪಚುನಾವಣೆ ಹಾಗೂ ಎರಡು ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ನೊಂದಿಗೆ ಮಾಡಿಕೊಂಡ ಮೈತ್ರಿಯಿಂದ ಬಸವಳಿದಿದೆ. ತೀರ್ಥಹಳ್ಳಿಯಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಪಕ್ಷಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಪರೂಪಕ್ಕೆ ಭರ್ಜರಿ ಪ್ರದರ್ಶನ ನೀಡುವ ಜೆಡಿಎಸ್ ಈಗ ಎರಡು ಕ್ಷೇತ್ರಕ್ಕಷ್ಟೇ ಪೈಪೋಟಿ ನೀಡಲು ಶಕ್ತವಾಗಿದೆ. ಆಮ್ ಆದ್ಮಿ ಪಾರ್ಟಿ ಸದ್ದು ಮಾಡುತ್ತಿದ್ದರೂ ಚುನಾವಣೆಯಲ್ಲಿ ಗಮನಾರ್ಹ ಪ್ರದರ್ಶನ ಕಷ್ಟ.
| ಅರವಿಂದ ಅಕ್ಲಾಪುರ ಶಿವಮೊಗ್ಗ
ಕಳೆದೊಂದು ವರ್ಷದಿಂದ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ಶಿಕಾರಿಪುರದಲ್ಲಿ ಹೊಸ ಮುಖ ಬರುತ್ತಾ ಎಂಬುದು. 75 ವಯೋಮಿತಿ ದಾಟಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಲ್ಲ ಎಂಬ ನಂಬಿಕೆ ಸಾರ್ವತ್ರಿಕವಾಗುತ್ತಿರುವ ಕಾಲಘಟ್ಟದಲ್ಲಿ ಈ ಪ್ರಶ್ನೆ ಪ್ರಸ್ತುತವೇ. ಬರಲಿರುವ ಚುನಾವಣೆಯಲ್ಲಿ ಕಣಕ್ಕಿಳಿಯಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಘೊಷಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರಿಗೂ ವಯಸ್ಸಿನ ಆಧಾರದಲ್ಲಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕಷ್ಟ ಎಂಬ ಮಾತು ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರು ಶಿಕಾರಿಪುರದಿಂದ ವಿಜಯೇಂದ್ರನ ಹೆಸರು ಘೊಷಣೆ ಮಾಡಿದ್ದಾರೆ. ಆದರೆ ಈಶ್ವರಪ್ಪ ಅವರು ಇದುವರೆಗೆ ಪುತ್ರ ಕಾಂತೇಶ್ ಹೆಸರನ್ನು ಎಲ್ಲೂ ಬಹಿರಂಗವಾಗಿ ಪ್ರಸ್ತಾಪಿಸಿಲ್ಲ. ಕಾಂಗ್ರೆಸ್ನಲ್ಲಿ ಕಾಗೋಡು ತಿಮ್ಮಪ್ಪ ಅವರಿಗೂ ಟಿಕೆಟ್ ಕಷ್ಟ ಎಂಬ ಮಾತುಗಳಿವೆ. ಹೀಗಾಗಿ ಹಳಬರಿಗೆ ಟಿಕೆಟ್ ಸಿಗುತ್ತಾ? ಹೊಸ ಮುಖ ಬರುತ್ತಾ ಎಂಬ ಚರ್ಚೆ ನಡೆಯುತ್ತಲೇ ಇದೆ.