ಕಲಘಟಗಿ ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಈ ಬಾರಿಯೂ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ಹು-ಧಾ ಸೆಂಟ್ರಲ್ ಅಥವಾ ಹು-ಧಾ ಪಶ್ಚಿಮ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಒಂದು ವೇಳೆ ಅವೆರೆಡೂ ಕ್ಷೇತ್ರದ ಟಿಕೆಟ್ ತಪ್ಪಿದರೆ, ಕಲಘಟಗಿಯಿಂದಾದರೂ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಗಣಿ ಉದ್ಯಮಿ, ಕಾಂಗ್ರೆಸ್ನ ಸಂತೋಷ ಲಾಡ್ 2008ರಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದ ನಂತರ ಕಲಘಟಗಿ ರಾಜ್ಯ ರಾಜಕೀಯದ ಗಮನ ಸೆಳೆಯಿತು. 2013ರ ಚುನಾವಣೆಯಲ್ಲಿಯೂ ಮರು ಆಯ್ಕೆಗೊಂಡ ಸಂತೋಷ ಲಾಡ್ ಅವರನ್ನು 2018ರ ಚುನಾವಣೆಯಲ್ಲಿ ತಿರಸ್ಕರಿಸಿ, ಬಿಜೆಪಿಯ ನಿಂಬಣ್ಣವರ ಅವರನ್ನು ಮತದಾರರು ಆಯ್ಕೆ ಮಾಡಿದರು. ಲಾಡ್ ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಅತಿ ವಿರಳ. ಇದು ಅವರ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಸಂತೋಷ ಲಾಡ್ ಇದೀಗ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ನ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಟಿಕೆಟ್ಗಾಗಿ ಹರಸಾಹಸ ನಡೆಸಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರೂ ಆಕಾಂಕ್ಷಿ. ಜೆಡಿಎಸ್ನಿಂದ ಡಾ. ಈರಣ್ಣ ಶೀಗಿಗಟ್ಟಿ, ಮಾರುತಿ ಹಿಂಡಸಗೇರಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮರಾಠ, ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಆಗಿವೆ.