ದಕ್ಷಿಣ ಬೆಂಗಳೂರಿನಲ್ಲಿ ಅಸಾಮಾನ್ಯ ಫೈಟ್ ಲಕ್ಷಣ; ಬಿಜೆಪಿ-ಕಾಂಗ್ರೆಸ್​ಗೆ ಆಕಾಂಕ್ಷಿಗಳ ದಂಡು, ದಾಕ್ಷಿಣ್ಯದ ಸಂಕಟ

Bgudi
Published on
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅ‘ಸಾಮಾನ್ಯ’ ಪೈಪೋಟಿಯ ಲಕ್ಷಣ ಗೋಚರಿಸಲಾರಂಭಿಸಿವೆ. ಈ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. ಉದ್ಯಮ-ಮಧ್ಯಮ, ಬಡವ-ಬಲ್ಲಿದ ಸಹಿತ ಸಮಾಜದ ಎಲ್ಲರನ್ನು ಬೆರೆತ ‘ಹದವರಿತ’ ಪ್ರಾಂತವಿದು. ಇದರಿಂದಾಗಿ ಸ್ಪರ್ಧಾ ಕಲಿಗಳು ರಣವ್ಯೂಹದೊಳಗೆ ನುಗ್ಗಿ ಬಹುಸಂಖ್ಯಾತ, ಅಲ್ಪಸಂಖ್ಯಾತ, ದಲಿತ-ಬಲಿತ, ವರ್ಚಸ್ಸು-ತೇಜಸ್ಸು, ಆಂತರಿಕ ಹೊಂದಾಣಿಕೆ ಇತ್ಯಾದಿ ಅಸ್ತ್ರಗಳನ್ನು ಬಳಸಿ ಜಯಭೇರಿ ಬಾರಿಸುವ ಅವಕಾಶ ಮುಕ್ತ. ಈ ಪ್ರದೇಶ ನಿಸ್ಸಂಶಯವಾಗಿ ಬಿಜೆಪಿ ಭದ್ರಕೋಟೆ. ಆದರೆ, ಅದೇ ಬೀಗುವಿಕೆ ಮುಂದುವರಿಯಲಿದೆ ಎಂಬ ಖಾತರಿಯಿಲ್ಲ. ‘ಸ್ವಯಂಕೃತ ಅಪರಾಧ’ ತಿಳಿದುಕೊಂಡ ಕಾಂಗ್ರೆಸ್ ಭುಜಬಲದ ಪರಾಕ್ರಮಕ್ಕೆ ಸಜ್ಜಾಗುತ್ತಿದೆ. ಕಮಲ-ಕೈಗೆ ಆಕಾಂಕ್ಷಿಗಳ ದೊಡ್ಡದಂಡು ಬಿಸಿತುಪ್ಪವಾಗಲಿದೆ. ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಅದಲು-ಬದಲು ಕಂಚಿ ಕದಲು ಎಂಬ ಆಟ, ಬಂಡಾಯದ ಕಾಟ, ಅಚ್ಚರಿ ಮೇಲಾಟಗಳು ಜೋರಾಗಲಿವೆ. ಜೆಡಿಎಸ್ ಕಿಂಗ್​ವೆುೕಕರ್ ಅಲ್ಲ, ಕಿಂಗ್ ಆಗಬೇಕು ಎಂಬ ಸಂಕಲ್ಪ ಮಾಡಿರುವ ದಳಪತಿಗಳಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದರೆ, ಸಂಘಟನೆ ಕಟ್ಟಿ ಬೆಳೆಸಲು ಶ್ರಮಿಸುತ್ತಿರುವ ಆಮ್​ದಿ್ಮ ಪಾರ್ಟಿ (ಆಪ್)ಗೆ ಬೇರೂರುವ ಧಾವಂತ. ಈ ವ್ಯಾಪ್ತಿಯ ಬಿಬಿಎಂಪಿ, ಲೋಕಸಭೆ ಚುನಾವಣೆಯಲ್ಲಿ ಕಮಲ ಕಲಿಗಳಿಗೆ ಸುಲಭವಾಗಿ ಒಲಿಯುವ ವಿಜಯಲಕ್ಷ್ಮೀ, ವಿಧಾನಸಭೆ ಚುನಾವಣೆ ಬಂದಾಗ ಚಂಚಲೆಯಾಗಿ ಬಿಡುತ್ತಾಳೆ. ಇದು, ಬಿಜೆಪಿಗೆ ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿ ಕಾಡುತ್ತಿದೆ.

| ಮೃತ್ಯುಂಜಯ ಕಪಗಲ್ ಬೆಂಗಳೂರು

ಸೋಮಣ್ಣ ನಡೆ ನಿಗೂಢ

ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಹಾಗೂ ಹಾಲಿ ಸಚಿವ ವಿ.ಸೋಮಣ್ಣ ನಡೆ ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ನಿಗೂಢವಾಗಿದೆ. ಪುತ್ರ ಅರುಣ್​ಗೆ ಟಿಕೆಟ್ ಕೊಡಿಸಬೇಕೆಂಬ ಒಲವಿದ್ದರೂ ಪಕ್ಷದ ನೀತಿ ಅಡ್ಡಿಯಾಗಿದೆ. ಕೊನೆಯ ಹಂತದಲ್ಲಿ ಬೇರೆಡೆ ಜಿಗಿದರೆ ಉಮೇಶ್ ಶೆಟ್ಟಿ ಆಸೆಯಿಟ್ಟುಕೊಂಡಿದ್ದಾರೆ. ಕಾಂಗ್ರೆಸ್​ನಿಂದ ಪ್ರಿಯಕೃಷ್ಣ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಎದುರಾಳಿ ಬದಲಾದರೆ ಇವರ ಕ್ಷೇತ್ರವೂ ಬದಲಾಗುವ ಸಾಧ್ಯತೆಗಳಿವೆ. ಜೆಡಿಎಸ್​ನಿಂದ ಆರ್.ಪ್ರಕಾಶ್ ಪ್ರಬಲ ಆಕಾಂಕ್ಷಿಯಾಗಿದ್ದರೆ, ಆಮ್ ಆದ್ಮಿ ಪಾರ್ಟಿ (ಆಪ್) ಸಮರ್ಥರ ತಲಾಷೆಯಲ್ಲಿದೆ.

ಹಳೇ ಕಲಿಗಳು ಮತ್ತೆ ಮುಖಾಮುಖಿ

ವಿಜಯನಗರ ಕ್ಷೇತ್ರದ ಹ್ಯಾಟ್ರಿಕ್ ಹೀರೋ ಕಾಂಗ್ರೆಸ್​ನ ಎಂ.ಕೃಷ್ಣಪ್ಪ, ಕಳೆದ ಬಾರಿ 2,775 ವೋಟುಗಳಿಂದ ಸೋತ ಬಿಜೆಪಿಯ ಎಚ್. ರವೀಂದ್ರ ಮತ್ತೆ ಮುಖಾಮುಖಿಯಾಗುವ ಸಂಭವವಿದೆ. ಚುನಾವಣಾ ತಂತ್ರಗಾರಿಕೆಯಲ್ಲಿ ನುರಿತವರು ಹಾಗೂ ಮೋದಿ ಅಲೆಯನ್ನು ನೆಚ್ಚಿಕೊಂಡವರ ಮಧ್ಯೆ ಹಣಾಹಣಿ ಮರುಕಳಿಸಲಿದೆ. ಈ ಕ್ಷೇತ್ರದಲ್ಲಿ ಕೊನೇ ಹಂತದಲ್ಲಿ ಅಭ್ಯರ್ಥಿಯನ್ನು ಫೈನಲ್ ಮಾಡುವುದು ಬಿಜೆಪಿಗೆ ಮುಳುವಾಗಿದೆ. ಜೆಡಿಎಸ್ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದೆ.

ದಕ್ಷಿಣದಲ್ಲಿ ಕೃಷ್ಣಪ್ಪ ಗೆಲುವಿನ ಓಟ

ಬೆಂಗಳೂರು ದಕ್ಷಿಣ ಕ್ಷೇತ್ರದ ಹಿಂದಿನ ಮೂರು ಚುನಾವಣೆಗಳಲ್ಲೂ ಬಿಜೆಪಿಯ ಎಂ.ಕೃಷ್ಣಪ್ಪ ಜಯಗಳಿಸಿದ್ದಾರೆ. ಅವರ ಎದುರು ಎರಡು ಬಾರಿ ಸ್ಪರ್ಧಿಸಿದ್ದ ಕಾಂಗ್ರೆಸ್​ನ ಆರ್.ಕೆ.ರಮೇಶ್ ಈ ಸಲವೂ ಎದುರಾಳಿಯಾಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಎಂ.ಕೃಷ್ಣಪ್ಪ ಅವರೇ ಮತ್ತೆ ಸ್ಪರ್ಧೆಗೆ ಇಳಿಯುವ ಸಾಧ್ಯತೆಗಳಿದ್ದು, ಕಾಂಗ್ರೆಸ್​ನಿಂದ ಆರ್.ಕೆ. ರಮೇಶ್ ಜತೆಗೆ ರಾಜ ಗೋಪಾಲರೆಡ್ಡಿ, ಕುಮಾರ್ ಹೆಸರು ಕೇಳಿ ಬರುತ್ತಿದೆ. ಈ ಕ್ಷೇತ್ರಕ್ಕೆ ಜೆಡಿಎಸ್​ಗಾಗಿ ಸಮರ್ಥ ಉಮೇದುವಾರನನ್ನು ಹುಡುಕಿ ತರುವ ಜವಾಬ್ದಾರಿ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿಗೆ ದಳಪತಿಗಳು ಒಪ್ಪಿಸಿದ್ದಾರೆನ್ನಲಾಗಿದೆ.

ವಿಸ್ತರಣೆಯತ್ತ ಸಾಮ್ರಾಟ್ ಸಾಮ್ರಾಜ್ಯ

ಉತ್ತರಹಳ್ಳಿ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಪದ್ಮನಾಭನಗರ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿರುವ ಸಚಿವ ಆರ್. ಅಶೋಕ್ ಬಿಜೆಪಿಯೊಳಗೆ ಸಾಮ್ರಾಟರೆಂದೇ ಗುರುತಿಸಿಕೊಂಡವರು. ನೀವೂ ಗೆಲ್ಲಿ, ಪಕ್ಕದ ಕ್ಷೇತ್ರವನ್ನೂ ಗೆಲ್ಲಿಸಿ ಎಂಬ ಪಕ್ಷದ 1+1 ಸೂತ್ರದ ಚಿಂತನೆಯನ್ನು ಅಶೋಕ್ ಗಂಭೀರವಾಗಿ ಪರಿಗಣಿಸಿದ್ದು, ಸ್ವಕ್ಷೇತ್ರ ಹೊಸಬರಿಗೆ ಬಿಟ್ಟುಕೊಟ್ಟು ಬ್ಯಾಟರಾಯನಪುರ ಇಲ್ಲವೇ ಬೇರೆ ಕ್ಷೇತ್ರಕ್ಕೆ ವಲಸೆ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಬದಲೀ ಅಭ್ಯರ್ಥಿ ಸ್ಥಾನಕ್ಕೆ ಎಲ್.ಶ್ರೀನಿವಾಸ ಹೆಸರು ಕೇಳಿಬರುತ್ತಿದ್ದು, ಇನ್ನೂ ಕೆಲವರು ಆಸೆಯಿಟ್ಟುಕೊಂಡಿದ್ದು, ಅಶೋಕ್ ನಡೆಯನ್ನು ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಟಿಕೆಟ್ ವಂಚಿತ ಗುರಪ್ಪ ನಾಯ್ಡು ಜತೆಗೆ ರಘುನಾಥನಾಯ್ಡು ಹೆಸರುಗಳು ಚಾಲ್ತಿಯಲ್ಲಿದ್ದು, ಜೆಡಿಎಸ್​ನಿಂದ ಹರಿಬಾಬು ಲಾಬಿ ನಡೆಸಿದ್ದಾರೆ.

ರೆಡ್ಡಿಗೆ ಸೆಡ್ಡು ಹೊಡೆಯೋರಿಲ್ಲ

ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಕಾಂಗ್ರೆಸ್​ನ ರಾಮಲಿಂಗಾರೆಡ್ಡಿ ಮತ್ತೆ ಸ್ಪರ್ಧಿಸುವುದು ಬಹುತೇಕ ಖಚಿತ. ಅವರಿಗೆ ಸಡ್ಡು ಹೊಡೆಯುವವರ ಕೊರತೆಯಿದೆ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಪ್ರಸಾದ್​ರೆಡ್ಡಿ ತೀವ್ರ ಪೈಪೋಟಿ ಒಡ್ಡಿದ್ದರು. ನಂತರದ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾದರು, ಬಿಜೆಪಿ ಪೈಪೋಟಿ ಸೊರಗಿತು. ಕಳೆದ ಬಾರಿ ಸೋತ ಲಲ್ಲೇಶ್​ರೆಡ್ಡಿ, ಅನಿಲ್​ಶೆಟ್ಟಿ ಸೇರಿ ಕೆಲವರು ಕಮಲಪಡೆ ಹುರಿಯಾಳಾಗುವ ಆಸೆಯಿಟ್ಟುಕೊಂಡಿದ್ದಾರೆ. ಜೆಡಿಎಸ್ ಸದ್ಯಕ್ಕೆ ಹುಡುಕಾಟದಲ್ಲಿದೆ.

ಖುಲಾಯಿಸಿದ ಸೌಮ್ಯಾ ಅದೃಷ್ಟ

ಜಯನಗರ ಬಿಜೆಪಿ ಹಿಡಿತವಿರುವ ಕ್ಷೇತ್ರಗಳಲ್ಲೊಂದು. ಸತತ ಎರಡು ಬಾರಿ ಗೆದ್ದಿದ್ದ ಬಿ.ಎನ್. ವಿಜಯಕುಮಾರ್ ಕಳೆದ ಸಲ ಚುನಾವಣೆ ಪ್ರಕ್ರಿಯೆ ಹಂತದಲ್ಲಿ ನಿಧನರಾಗಿದ್ದರಿಂದ ಮುಂದೂಡಿಕೆಯಾಯಿತು. ಅನುಕಂಪ ಕೈಹಿಡಿದೀತು ಎಂದು ವಿಜಯಕುಮಾರ್ ಅವರ ಸೋದರ ಬಿ.ಎನ್. ಪ್ರಹ್ಲಾದ ಅವರನ್ನು ಬಿಜೆಪಿ ಕಣಕ್ಕಿಳಿಸಿತು. ಎಲ್ಲ ಲೆಕ್ಕಾಚಾರ ತಲೆಕೆಳಗಾಗಿ ಕಾಂಗ್ರೆಸ್​ನ ಸೌಮ್ಯಾರೆಡ್ಡಿ (ರಾಮಲಿಂಗಾರೆಡ್ಡಿ ಪುತ್ರಿ) ಅದೃಷ್ಟ ಖುಲಾಯಿಸಿತು. ಈ ಸಲವೂ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿಕೊಳ್ಳುವ ಸಂಭವವಿದ್ದು, ಬಿಜೆಪಿಯಿಂದ ಮಾಜಿ ಡೆಪ್ಯುಟಿ ಮೇಯರ್ ಸಿ.ಕೆ.ರಾಮಮೂರ್ತಿ, ಪರಾಜಿತ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ ಹೆಸರು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಜೆಡಿಎಸ್​ಗೆ ಸೂಕ್ತ ಅಭ್ಯರ್ಥಿ ಅಭಾವವಿದೆ ಎಂದು ಹೇಳಲಾಗುತ್ತಿದೆ.

ಗೆಲ್ಲುವ ಕುದುರೆಗೆ ಮಣೆ

ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಎಂ.ಸತೀಶ ರೆಡ್ಡಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಾಲಿಗೆ ಗೆಲ್ಲುವ ಕುದುರೆ. ಮತ್ತೊಮ್ಮೆ ಅವರಿಗೆ ಮಣೆ ಹಾಕುವ ಸಾಧ್ಯತೆಗಳಿದೆ. ಕಾಂಗ್ರೆಸ್ ಪಕ್ಷದಿಂದ ಕವಿತಾರೆಡ್ಡಿ, ಉಮಾಪತಿ ಸೇರಿ ಹಲವು ಹೆಸರು ಕೇಳಿಬರುತ್ತಿವೆ. ಜೆಡಿಎಸ್​ನಿಂದ ಸಮೀರ್ ಖಾನ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ರವಿಗೆ ಕವಿದ ಕುಟುಂಬ ಕಾಮೋಡ

ಬಸವನಗುಡಿ ಕ್ಷೇತ್ರದ ಹ್ಯಾಟ್ರಿಕ್ ಸರದಾರ ಬಿಜೆಪಿಯ ಎಲ್. ರವಿಸುಬ್ರಮಣ್ಯ ಅವರಿಗೆ ಕುಟುಂಬಕ್ಕೊಂದು ಟಿಕೆಟ್ ನೀತಿಯ ಮೋಡ ಕವಿದಿದೆ. ನಿಯಮ ಕಟ್ಟುನಿಟ್ಟಾಗಿ ಪಾಲನೆಯಾದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ಎಂಬ ಕಾರಣಕ್ಕೆ ರವಿ ಸುಬ್ರಮಣ್ಯ ಬದಲು ಅಚ್ಚರಿ ಅಭ್ಯರ್ಥಿಗೆ ಅವಕಾಶ ಸಿಗಬಹುದು. ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಹೆಸರು ಇಣುಕಿದೆ. ಕಾಂಗ್ರೆಸ್​ನಲ್ಲಿ ಎಂಎಲ್​ಸಿ ಯು.ಬಿ. ವೆಂಕಟೇಶ್, ಕಾಂಗ್ರೆಸ್ ವೈದ್ಯ ವಿಭಾಗದ ಡಾ. ಶಂಕರ್​ಗುಹಾ ದ್ವಾರಕನಾಥ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಜೆಡಿಎಸ್​ನಿಂದ ಕಳೆದ ಬಾರಿ ಸೋತ ಬಾಗೇಗೌಡ ಜತೆಗೆ ತಿಮ್ಮೇಗೌಡ ಆಕಾಂಕ್ಷಿಯಾಗಿದ್ದಾರೆ. ಆಪ್​ನಿಂದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಹೆಸರು ಕೇಳಿಬರುತ್ತಿದೆ. ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ ಈ ಬಾರಿ ನಿರ್ಣಾಯಕವಾಗಲಿದೆ.

ಅವರು ಬಿಟ್ಟು ಇವರ್ಯಾರು?

ಹೆಸರಿಗೆ ತದ್ವಿರುದ್ಧವಾಗಿದೆ ಚಿಕ್ಕಪೇಟೆ ಕ್ಷೇತ್ರದ ಚುನಾವಣಾ ರಾಜಕಾರಣದ ಕೆಮಿಸ್ಟ್ರಿ, ಜನರ ಸ್ಥಿತಿಗತಿಯ ನಕ್ಷೆ. ಬಡವರು, ಮಧ್ಯಮವರ್ಗ ಹಾಗೂ ಉಳ್ಳವರ ಸಮ್ಮಿಶ್ರಣ. ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಜತೆಗೆ ಎನ್.ಆರ್.ರಮೇಶ್, ಕಳೆದ ಬಾರಿ ಬಂಡಾಯವೆದ್ದಿದ್ದ ಹೇಮಚಂದ್ರ ಸಾಗರ್ ಹೆಸರು ಕೇಳಿಬರುತ್ತಿವೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಸೋತ ಆರ್.ವಿ.ದೇವರಾಜ್ ಅಥವಾ ಅವರ ಪತ್ನಿ, ಇವರಲ್ಲದೆ ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಪ್ರಯತ್ನ ಶುರುವಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕಣ್ಣಿಟ್ಟಿರುವ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಉಮೇದುವಾರಿಕೆ ವಿಷಯದಲ್ಲಿ ಅವರು ಬಿಟ್ಟು ಇವರ್ಯಾರು ಎಂಬುದು ಉಭಯ ಪಕ್ಷಗಳಲ್ಲಿನ ಸದ್ಯದ ಸ್ಥಿತಿ. ಜೆಡಿಎಸ್ ಹುರಿಯಾಳು ಆಯ್ಕೆ ಹೊಣೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೆಗಲೇರಿದ್ದರೆ, ಆಪ್, ಎಸ್​ಡಿಪಿಐ ಇತ್ತ ಗಮನನೆಟ್ಟಿವೆ.

ಪಕ್ಷಗಳ ಬಲಾಬಲ: ಒಂಬತ್ತು ಕ್ಷೇತ್ರಗಳ ಪೈಕಿ ಬಿಜೆಪಿ ಆರು, ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದೆ. ಬಿಜೆಪಿ: ವಿ.ಸೋಮಣ್ಣ (ಗೋವಿಂದರಾಜನಗರ), ಆರ್.ಅಶೋಕ್ (ಪದ್ಮನಾಭನಗರ), ಉದಯ್ ಗರುಡಾಚಾರ್ (ಚಿಕ್ಕಪೇಟೆ), ಎಲ್.ರವಿಸುಬ್ರಮಣ್ಯ (ಬಸವನಗುಡಿ) ಎಂ.ಸತೀಶ್​ರೆಡ್ಡಿ (ಬೊಮ್ಮನಹಳ್ಳಿ), ಎಂ.ಕೃಷ್ಣಪ್ಪ (ಬೆಂಗಳೂರು ದಕ್ಷಿಣ) ಕಾಂಗ್ರೆಸ್: ಎಂ.ಕೃಷ್ಣಪ್ಪ (ವಿಜಯನಗರ), ರಾಮಲಿಂಗಾರೆಡ್ಡಿ (ಬಿ.ಟಿ.ಎಂ. ಲೇಔಟ್), ಸೌಮ್ಯಾರೆಡ್ಡಿ (ಜಯನಗರ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net