ಸಕ್ಕರೆನಾಡಿನಲ್ಲಿ ಒಳಒಪ್ಪಂದ ಡಯಾಬಿಟಿಸ್!

Election
Published on
ಬೆಳಗಾವಿ ಜಿಲ್ಲೆಯ ಸಂಪೂರ್ಣ ರಾಜಕಾರಣ ‘ಸಕ್ಕರೆ’ ಲಾಬಿಯ ಕುಳಗಳ ಕೈಯಲ್ಲಿದೆ. ‘ನಿಮ್ಮ ಕ್ಷೇತ್ರಕ್ಕೆ ನಾವು ಬರುವುದಿಲ್ಲ. ನಮ್ಮ ಕ್ಷೇತ್ರಕ್ಕೆ ನೀವು ಬರಬೇಡಿ’ಎಂಬ ಅಘೋಷಿತ ಹೊಂದಾಣಿಕೆ ರಾಜಕಾರಣ ರಾಷ್ಟ್ರೀಯ ಪಕ್ಷಗಳಿಗಿಂತ ವೈಯಕ್ತಿಕ ಪ್ರತಿಷ್ಠೆ ಮೇಲೆ ನಿಂತಿದೆ. ‘ಒಳಒಪ್ಪಂದ’ ರಾಜಕಾರಣ ಸಕ್ಕರೆ ಜಿಲ್ಲೆಗೆ ಅಂಟಿರುವ ‘ಡಯಾಬಿಟಿಸ್’(ಮಧುಮೇಹ) ಎಂದೇ ಬಣ್ಣಿಸಲಾಗುತ್ತಿದೆ. ಕತ್ತಿ ಸಹೋದರರಾಗಲಿ, ಜಾರಕಿಹೊಳಿ ಸಹೋದರರಾಗಲಿ, ಎಲ್ಲರೂ ತಮ್ಮ ಕ್ಷೇತ್ರಗಳನ್ನು ಗಟ್ಟಿಯಾಗಿಟ್ಟುಕೊಂಡು ಅಧಿಕಾರ ಚಲಾಯಿಸುತ್ತಿದ್ದಾರೆ. ಕಳೆದೆರಡು ಎಂಎಲ್ಸಿ ಚುನಾವಣೆಯಲ್ಲಿ ನಿರಂತರವಾಗಿ ಇಬ್ಬರು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಪಕ್ಷಕ್ಕಿಂತ ನಾವೇ ಬಲಿಷ್ಠರು ಎಂಬುದನ್ನು ಪರೋಕ್ಷವಾಗಿ ಇಲ್ಲಿನ ರಾಜಕಾರಣಿಗಳು ಕಮಲಪಡೆ ಹೈಕಮಾಂಡ್​ಗೆ ಸಾಬೀತು ಪಡಿಸಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್​ಗೆ ನೆಲೆ ಇಲ್ಲ. ದಿ.ಬಿ.ಶಂಕರಾನಂದ ಅವರ ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈಗ ಬೆರಳೆಣಿಕೆಯಷ್ಟು ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ಕೈ ಕೋಟೆ ಛಿದ್ರವಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ (ನಿಪ್ಪಾಣಿ, ರಾಯಬಾಗ, ಹುಕ್ಕೇರಿ,ಅಥಣಿ, ಕಾಗವಾಡ ಮತ್ತು ಕುಡಚಿ) ಬಿಜೆಪಿ ಅಧಿಕಾರ ಹಿಡಿದಿದ್ದು, 2 ಕ್ಷೇತ್ರಗಳು (ಚಿಕ್ಕೋಡಿ-ಯಮಕನಮರಡಿ)ಮಾತ್ರ ಕಾಂಗ್ರೆಸ್ ವಶದಲ್ಲಿವೆ.

| ರಾಯಣ್ಣ ಆರ್.ಸಿ. ಬೆಳಗಾವಿ

ಗಣೇಶ ವಿರುದ್ಧ ಅಮಿತ ಕೋರೆ

ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ನದೇ ಆದ ಮತಬ್ಯಾಂಕ್ ಹೊಂದಿರುವ ಎಂಎಲ್ಸಿ ಹಾಗೂ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಮತ್ತೆ ಕಾಂಗ್ರೆಸ್​ನಿಂದ ಕಣಕ್ಕಿಳಿಯಲಿದ್ದಾರೆ. ಇವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹುಡುಕಾಟ ನಡೆಸುತ್ತಿದ್ದು, ಜಗದೀಶ ಕವಟಗಿಮಠ ಅಥವಾ ಅಮಿತ ಕೋರೆ ಅವರನ್ನು ಕಣಕ್ಕಿಳಿಸಿ ಗಣೇಶ ಹುಕ್ಕೇರಿ ಅವರನ್ನು ಸೋಲಿಸುವ ಲೆಕ್ಕಾಚಾರ ಜೋರಾಗಿದೆ.

ಕುಮಠಳ್ಳಿ ವಿರುದ್ಧ ಬುಟಾಳಿ ಕಣಕ್ಕೆ?

ಅಥಣಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ ಲಕ್ಷ್ಮಣ ಸವದಿ ಈಗ ವಿಧಾನ ಪರಿಷತ್ ಸದಸ್ಯರಾಗಿದ್ದು, ಮತ್ತೊಮ್ಮೆ ಮಹೇಶ್ ಕುಮಠಳ್ಳಿ ಅವರನ್ನೇ ಕಣಕ್ಕಿಳಿಸಲು ಬಿಜೆಪಿಯಲ್ಲಿ ಸದ್ದಿಲ್ಲದೇ ತಯಾರಿ ನಡೆದಿದೆ. ಇದೇ ಕ್ಷೇತ್ರದಿಂದ ಹಣಬಲದ ಜತೆಗೆ ಉತ್ತಮ ಸಂಪರ್ಕ ಹೊಂದಿರುವ ಎಸ್.ಕೆ.ಬುಟಾಳಿ ಅವರನ್ನು ಸ್ಪರ್ಧೆಗಿಳಿದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯೋಜನೆ ರೂಪಿಸುತ್ತಿದ್ದಾರೆನ್ನಲಾಗಿದೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಪೊಲೀಸ್ ಅಧಿಕಾರಿಯಾಗಿರುವ ಬಸವರಾಜ ಬೀಸನಕೊಪ್ಪ ಕೂಡ ‘ಕೈ’ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಬಿರುಸಿನ ಕಸರತ್ತು ನಡೆಸುತ್ತಿದ್ದಾರೆ.

ಹುಕ್ಕೇರಿ ಉತ್ತರಾಧಿಕಾರಿ ಯಾರು?

ಹುಕ್ಕೇರಿ ಮತಕ್ಷೇತ್ರದಲ್ಲಿ ಸತತ 7 ಬಾರಿ ಗೆದ್ದು, ಒಂದು ಬಾರಿ ಸೋತಿರುವ ಹಾಲಿ ಸಚಿವ ಉಮೇಶ ಕತ್ತಿ ಜಾಗಕ್ಕೆ ಯಾರು ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ವಾರಕ್ಕೆರಡು ಬಾರಿ ಜನಸಂಪರ್ಕ ಸಭೆ ಮೂಲಕ ತಮ್ಮದೇ ಹಿಡಿತ ಹೊಂದಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಂದ್ರ ನೇರ್ಲಿ ಅವರನ್ನು ಅಖಾಡಕ್ಕಿಳಿಸಲು ಆರ್​ಎಸ್​ಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಪಕ್ಷ ಯಾರಿಗೆ ಬಿಫಾಮ್ರ್ ನೀಡಲಿದೆ ಎಂಬುದು ಕುತೂಹಲ. ಇನ್ನು ಕಾಂಗ್ರೆಸ್​ನಿಂದ ಮಾಜಿ ಸಚಿವ ಎ.ಬಿ.ಪಾಟೀಲ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸತೀಶ್​ರನ್ನು ಮಣಿಸಲು ಸ್ಕೆಚ್

ಯಮಕನಮರಡಿ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಲು ಬಿಜೆಪಿಯ ಒಂದು ಗುಂಪು ಸಿದ್ಧತೆ ಮಾಡಿಕೊಂಡಿದ್ದು, ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾರುತಿ ಅಷ್ಟಗಿ ಅಥವಾ ಬಸವರಾಜ ಹುಂದ್ರಿ ಅವರನ್ನು ಕಣಕ್ಕಿಳಿಸಲು ಜಿಲ್ಲೆಯ ಹಿರಿಯ ರಾಜಕರಾಣಿಗಳು ತಿರ್ವನಿಸಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಿಂದ ಗೆದ್ದಿರುವ ಸತೀಶ್ ಈ ಬಾರಿ ಅತಿ ಹೆಚ್ಚು ಅಂತರದಿಂದ ಜಯ ಸಾಧಿಸಬೇಕು ಎಂಬ ಉದ್ದೇಶದಿಂದ ಭರ್ಜರಿ ರಣತಂತ್ರ ಹೆಣೆಯುತ್ತಿದ್ದಾರೆ.

ಜೊಲ್ಲೆ ವಿರುದ್ಧ ಪಾಟೀಲ ಸ್ಪರ್ಧೆ!

ಸತತ ಎರಡು ಬಾರಿ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಸಚಿವರಾಗಿ ಕಾರ್ಯನಿರ್ವ ಹಿಸುತ್ತಿರುವ ಶಶಿಕಲಾ ಜೊಲ್ಲೆ ಅವರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಲಗೈಬಂಟ ಅರಿಹಂತ ಸೊಸೈಟಿ ಚೇರ್ಮನ್ ಹಾಗೂ ಬೋರಗಾಂವ ಗ್ರಾಮದ ಉತ್ತಮ್ ಪಾಟೀಲ ಅವರು ಕಾಂಗ್ರೆಸ್​ನಿಂದ ಅಖಾಡಕ್ಕಿಳಿಸುವುದಕ್ಕಾಗಿ ತೀರ್ವನಿಸಿ, ಜಾರಕಿಹೊಳಿ ಸಹೋದರರು ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದೆಡೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಕಾಂಗ್ರೆಸ್ ‘ಹೈ’ಕಮಾಂಡ್ ಉತ್ತಮ್ೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಾಯಬಾಗದ ಐಹೊಳೆಗೆ ಬೀಳುವುದೇ ಬ್ರೇಕ್?

ಮೀಸಲು ವಿಧಾನಸಭಾ ಕ್ಷೇತ್ರವಾದ ರಾಯಬಾಗದಲ್ಲಿ ಬಿಜೆಪಿಯಿಂದ ಸತತ 3 ಬಾರಿ ಗೆದ್ದಿರುವ ದುರ್ಯೋಧನ ಐಹೊಳೆ ಅವರನ್ನು ಸೋಲಿಸುವುದಕ್ಕಾಗಿ ಈ ಬಾರಿ ಹಿರಿಯ ಐಎಸ್​ಎಸ್ ಅಧಿಕಾರಿ ಮಹಾವೀರ ಮೋಹಿತೆ ಅಥವಾ ಅವರ ಸಹೋದರಿ ಜಿಪಂ ಮಾಜಿ ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಐಹೊಳೆ ಮತ್ತೊಮ್ಮೆ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ.

ಪಿ.ರಾಜೀವ್​ಗೆ ಸೆಡ್ಡು ಹೊಡೆವರೇ ಘಾಟಗೆ?

ರಾಜ್ಯಮಟ್ಟದ ನಾಯಕರಾಗಿ ಬೆಳೆಯುತ್ತಿರುವ ಕುಡಚಿ ಮೀಸಲು ಕ್ಷೇತ್ರದ ಶಾಸಕ ಪಿ.ರಾಜೀವ್ ಅವರು 2 ಬಾರಿ ಗೆದ್ದಿದ್ದಾರೆ. ಈಗ ಮತ್ತೆ ಕಾಂಗ್ರೆಸ್​ನ ಹಳೆಯ ಹುಲಿ ಎಸ್.ಬಿ. ಘಾಟಗೆ ಅವರನ್ನು ಕಣಕ್ಕಿಳಿಸಿ, ಗೆಲ್ಲಿಸಲು ಕೆಪಿಸಿಸಿ ನಾಯಕರು ಚುನಾವಣೆ ತಯಾರಿ ನಡೆಸುವಂತೆ ಘಾಟಗೆ ಅವರಿಗೆ ಸೂಚನೆ ನೀಡಿದ್ದಾರೆ. ಮತ್ತೊಂಡೆ ಹಾರೂಗೇರಿಯ ಮಹೇಶ ತಮ್ಮಣ್ಣವರ ಕೂಡ ಪಿ. ರಾಜೀವ್ ವಿರುದ್ಧ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೀಮಂತಗೆ ಕಾಗೆ ಕಾಟ

ಕಾಗವಾಡ ಮತಕ್ಷೇತ್ರದಲ್ಲಿ ತಮ್ಮದೇ ಆದ ಜನಬಲ ಹೊಂದಿರುವ ಸಕ್ಕರೆ ಉದ್ಯಮಿ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಕಾಂಗ್ರೆಸ್​ನಿಂದ ರಾಜು ಕಾಗೆ ಪ್ರಬಲ ಎದುರಾಳಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ ಶ್ರೀಮಂತ ಪಾಟೀಲರ ಧನಬಲ, ಜನಬಲದ ಎದುರು ಪ್ರಬಲರನ್ನು ಕಣಕ್ಕಿಳಿಸಲು ಅಂಕಲಿ ಮೂಲದ ವೈದ್ಯ ಡಾ. ಎನ್.ಎ. ಮಗದುಮ್ಮ ಅವರಿಗೆ ಟಿಕೆಟ್ ಕೊಡಿಸಲು ಕಾಂಗ್ರೆಸ್ ವಲಯದಲ್ಲಿ ಚಿಂತನೆ ನಡೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net