

| ಎನ್. ಮುನಿವೆಂಕಟೇಗೌಡ ಕೋಲಾರ
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. 40 ವರ್ಷಗಳಿಂದ ಹಾಲಿ ಶಾಸಕ ಕೆ.ಆರ್. ರಮೇಶ್ಕುಮಾರ್ (ಸ್ವಾಮಿ), ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ(ರೆಡ್ಡಿ) ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಮತ್ತೊಬ್ಬರ ಪ್ರವೇಶಕ್ಕೆ ಅವಕಾಶ ಸಿಕ್ಕಿಲ್ಲ.
1978ರಿಂದ 6 ಬಾರಿ ರಮೇಶ್ಕುಮಾರ್ ಹಾಗೂ 4 ಬಾರಿ ಜಿ.ಕೆ.ವೆಂಕಟಶಿವಾರೆಡ್ಡಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. 1978ರಲ್ಲಿ ಆರ್.ಜಿ.ನಾರಾಯಣರೆಡ್ಡಿ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ರಮೇಶ್ಕುಮಾರ್ಗೆ 1983ರ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಕೆ.ವೆಂಕಟಶಿವಾರೆಡ್ಡಿ ಎದುರು ಸೋಲು ಅನುಭವಿಸಿದರು. ಅಲ್ಲಿಂದ 2013ರ ತನಕ ಸ್ವಾಮಿ-ರೆಡ್ಡಿ ಪರಸ್ಪರ ಎದುರಾಳಿಗಳಾಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಒಂದು ಬಾರಿ ಅವರು, ಮತ್ತೊಂದು ಬಾರಿ ಇವರು ಆಯ್ಕೆಯಾಗುತ್ತಿದ್ದರು. ಇಬ್ಬರೂ ಆಗಾಗ ಪಕ್ಷ ಅದಲು-ಬದಲು ಮಾಡಿಕೊಂಡರೂ ಕಾರ್ಯಕರ್ತರು ಮಾತ್ರ ಅವರವರ ಹಿಂಬಾಲಕರಾಗಿಯೇ ಇದ್ದಾರೆ. ಈ ನಡುವೆ 2013, 2018ರಲ್ಲಿ ಆಯ್ಕೆಯಾಗುವ ಮೂಲಕ ರಮೇಶ್ಕುಮಾರ್ ರೋಸ್ಟರ್ ಪದ್ಧತಿ ಮುರಿದಿದ್ದಾರೆ.
ಮತದಾರರ ಲೆಕ್ಕಾಚಾರ: ಕ್ಷೇತ್ರದಲ್ಲಿ 2,05,932 ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳು 78 ಸಾವಿರ, ಒಕ್ಕಲಿಗರ ಮತಗಳು 67 ಸಾವಿರ ಇವೆ. ಅಲ್ಪಸಂಖ್ಯಾತರು 20 ಸಾವಿರ ಇದ್ದರೆ ಇತರ ಜಾತಿಯ ಮತಗಳು ಅಲ್ಪಪ್ರಮಾಣದಲ್ಲಿವೆ. ಕ್ಷೇತ್ರದಲ್ಲಿ ಎಸ್ಸಿ ಮತ್ತು ಎಸ್ಟಿ ಹೊರತುಪಡಿಸಿದರೆ ಒಕ್ಕಲಿಗದ್ದೇ ಪ್ರಾಬಲ್ಯ. ರಮೇಶ್ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರೂ ‘ಸ್ವಾಮಿ’ ನಿಷ್ಠೆ ಮೆರೆದಿದ್ದಾರೆ. ಜಿ.ಕೆ.ವೆಂಕಟಶಿವಾರೆಡ್ಡಿ ಒಕ್ಕಲಿಗ ಜನಾಂಗದ ಬೆಂಬಲದೊಂದಿಗೆ ಇತರ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಯಾರೇ ಗೆಲುವು ಸಾಧಿಸಿದರೂ ಅಂತರ 10 ಸಾವಿರ ಮತಗಳನ್ನು ದಾಟಿಲ್ಲ.
ಸಿದ್ದರಾಮಯ್ಯ ‘ಅಹಿಂದ’ ಶ್ರೀರಕ್ಷೆ: 2013ರಲ್ಲಿ ರಮೇಶ್ಕುಮಾರ್ ಮಂತ್ರಿಯಾದ ಬಳಿಕ ಕ್ಷೇತ್ರದಲ್ಲಿ ಪೈಲಟ್ ಯೋಜನೆ ಮೂಲಕ 20 ಸಾವಿರ ಮನೆಗಳು, ರಸ್ತೆಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ, ಕೆಸಿ ವ್ಯಾಲಿ ನೀರು, ಶುದ್ಧ ನೀರಿನ ಘಟಕಗಳು ಹೀಗೆ ಅಭಿವೃದ್ಧಿ ಕಡೆ ಹೆಚ್ಚು ಗಮನಕೊಟ್ಟ ಕಾರಣ 2018ರಲ್ಲೂ ಆಯ್ಕೆಯಾದರು. ಈ ಬಾರಿ ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿದರೆ ‘ಅಹಿಂದ’ ಮತಗಳು ಕೈಹಿಡಿಯಲಿವೆ ಎಂಬ ಲೆಕ್ಕಾಚಾರದಲ್ಲಿ ಹಾಲಿ ಶಾಸಕರಿದ್ದಾರೆ.
ಜಿ.ಕೆ.ವೆಂಕಟಶಿವಾರೆಡ್ಡಿ ಪರಾಭವಗೊಂಡಿದ್ದರೂ 10 ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತರ ರಕ್ಷಣೆಗಾಗಿ ನಿಂತಿದ್ದಾರೆ. ಅಧಿಕಾರ ಇಲ್ಲದಿದ್ದರೂ ಕಾರ್ಯಕರ್ತರ ಕೆಲಸ ಮಾಡಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ರಮೇಶ್ಕುಮಾರ್ ಗೆದ್ದು ಹ್ಯಾಟ್ರಿಕ್ ಸಾಧಿಸುವರೋ ಅಥವಾ ಜಿ.ಕೆ.ವೆಂಕಟಶಿವಾರೆಡ್ಡಿಗೆ ಸತತ ಸೋಲಿನ ಸಿಂಪಥಿ ಮತ್ತು ಕಾಂಗ್ರೆಸ್ನಲ್ಲಿನ ಹಿತಶತ್ರ್ರುಗಳ ಕಾಟ ವರವಾಗುವುದೋ ಕಾದು ನೋಡಬೇಕಿದೆ.
ಮೂರನೇ ವ್ಯಕ್ತಿಯ ಪ್ರವೇಶ?: ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತುಪಡಿಸಿದರೆ ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರದಲ್ಲಿ ಕಮಲ ಪಡೆ ಅಭ್ಯರ್ಥಿ ಘೊಷಣೆ ಆಗಿಲ್ಲದಿದ್ದರೂ ಎಸ್ಎಲ್ಎನ್ ಮಂಜುನಾಥ್ ಮತ್ತು ಡಾ.ವೇಣುಗೋಪಾಲ್ ಬಿರುಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಸ್ವಾಮಿ-ರೆಡ್ಡಿಗಳ ಮಧ್ಯೆ ಕಮಲ ಅರಳುವುದು ಕಷ್ಟಸಾಧ್ಯ. ಜತೆಗೆ ಸ್ವತಂತ್ರವಾಗಿ ಗುಂಜೂರು ಶ್ರೀನಿವಾಸರೆಡ್ಡಿ ಸಮಾಜಸೇವೆ ಮಾಡುವ ಮೂಲಕ ರೆಡ್ಡಿ-ಸ್ವಾಮಿ ಬೆಂಬಲಿಗರನ್ನು ತನ್ನ ಕಡೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಗೋಪಾಲಕೃಷ್ಣ ಕೈ ಟಿಕೆಟ್ ಆಕಾಂಕ್ಷಿ!: ಸುಮಾರು 30 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ದಳಸನೂರು ಎಲ್.ಗೋಪಾಲಕೃಷ್ಣ ಈ ಬಾರಿ ಪಕ್ಷದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ರಮೇಶ್ಕುಮಾರ್ ಅವರಿಂದ ಅಂತರ ಕಾಯ್ದುಕೊಂಡಿದ್ದು, ಪಕ್ಷ ಟಿಕೆಟ್ ನೀಡಿದರೆ ನನ್ನ ಪರವಾಗಿ ಕೆಲಸ ಮಾಡಬೇಕೆಂದು ಸಭೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ಗೆ ಕಷ್ಟವಾಗಬಹುದು.