

ಸೋಮವಾರಪೇಟೆ : ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಜಾಗದ ಹಕ್ಕುಪತ್ರಕ್ಕೆ ಆಗ್ರಹಿಸಿ ಡಿ.20ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ರೈತರ ಅಹೋರಾತ್ರಿ ಪ್ರತಿಭಟನೆಗೆ ಪೂರ್ವಭಾವಿ ಸಭೆ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆಯಿತು.
ತಾಲೂಕಿನ ಗ್ರಾಮಗಳಿಂದ 65 ಬಸ್‌ಗಳಲ್ಲಿ ರೈತರು ಪ್ರತಿಭಟನೆಗೆ ತೆರಳಲಿದ್ದಾರೆ. 20 ರಂದು ಬೆಳಗ್ಗೆ 8.30ಕ್ಕೆ ಕಕ್ಕೆಹೊಳೆ ಜಂಕ್ಷನ್‌ನಿಂದ ಎಲ್ಲ ಬಸ್‌ಗಳು ಹೊರಡಲಿದ್ದು, ಕುಶಾಲನಗರ, ಸುಂಟಿಕೊಪ್ಪ ಮಾರ್ಗವಾಗಿ 10.30ಕ್ಕೆ ಸುದರ್ಶನ ಸರ್ಕಲ್ ತಲುಪಲಿವೆ. ಅಲ್ಲಿಂದ ಮೆರವಣಿಗೆ ನಡೆಯಲಿದ್ದು ಗಾಂಧಿ ಮೈದಾನದಲ್ಲಿ ಧರಣಿ ನಡೆಯಲಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.
ಹಾಲಿ, ಮಾಜಿ ಶಾಸಕರು, ಸಂಸದರಿಗೆ ಆಹ್ವಾನ ನೀಡಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಸಿಎಫ್ ಧರಣಿ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರೈತ ಮುಖಂಡರಾದ ಕೆ.ಎಂ.ದಿನೇಶ್, ಕೆ.ಎಂ.ಲೋಕೇಶ್, ಎಸ್.ಬಿ.ಭರತ್‌ಕುಮಾರ್, ಬಗ್ಗನ ಅನಿಲ್, ನಂದಕುಮಾರ್, ಮಿಥುನ್ ಹಾನಗಲ್, ವಿ.ಎಂ.ವಿಜಯ, ಬಿ.ಜೆ.ದೀಪಕ್, ರಾಜಪ್ಪ, ದಿವಾಕರ್ ಕೂತಿ, ಚೌಡ್ಲು ಯೋಗೇಂದ್ರ ಹಾಗೂ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.