ಹೊರಟ್ಟಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ

New Horatti new
Published on

ಹುಬ್ಬಳ್ಳಿ : ಸತತ 45 ವರ್ಷಗಳಿಂದ ಸೋಲಿಲ್ಲದ ಸರದಾರನಂಂತೆ ರಾಜಕೀಯದಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸುವ ಉದ್ದೇಶದಿಂದ ಬಸವರಾಜ ಹೊರಟ್ಟಿ ಅಭಿಮಾನಿ ಬಳಗ ಹಾಗೂ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಪೂರ್ವಭಾವಿ ಸಭೆಯನ್ನು ನಗರದಲ್ಲಿ ಶನಿವಾರ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಸವರಾಜ ಹೊರಟ್ಟಿ ಅವರು ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ನಾಡಿಗೆ ಹೆಮ್ಮೆಯ ವ್ಯಕ್ತಿ. ಅಭಿನಂದನಾ ಸಮಾರಂಭಕ್ಕೆ ಉಪ ರಾಷ್ಟ್ರಪತಿ ಸೇರಿದಂತೆ ಇನ್ನಿತರ ಗಣ್ಯರನ್ನು ಕರೆಸುವ ಹಾಗೂ ಕಾರ್ಯಕ್ರಮವನ್ನು ಎಲ್ಲಿ ಮತ್ತು ಯಾವಾಗ ಆಯೋಜಿಸುವ ಕುರಿತು ರ್ಚಚಿಸಿ ನಿರ್ಧರಿಸೋಣ ಎಂದರು.

ಹಿರಿಯ ಮುಖಂಡ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಅಭಿನಂದನಾ ಸಮಾರಂಭಕ್ಕೆ ಪ್ರತ್ಯೇಕ ಸಮಿತಿ ರಚಿಸುವಂತೆ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಆಗಸ್ಟ್ 16 ಅಥವಾ 17ರಂದು ಅಭಿನಂದನಾ ಸಮಾರಂಭ ಆಯೋಜಿಸುವ ಬಗ್ಗೆ ಚಿಂತನೆ ನಡೆದಿದೆ. ಭಾನುವಾರ ಸಂಜೆ 5 ಗಂಟೆಗೆ ಬಸವರಾಜ ಹೊರಟ್ಟಿ ಅವರ ನಿವಾಸದಲ್ಲಿ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಶಿಕ್ಷಕ ಸಂಜೀವಕುಮಾರ ಭೂಶೆಟ್ಟಿ ಮಾತನಾಡಿ, ಹೊರಟ್ಟಿ ಅವರು ಪ್ರತಿನಿಧಿಸುವ ಕ್ಷೇತ್ರದ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕು. ವಿದ್ಯಾರ್ಥಿಗಳ ಹೃದಯ ತಪಾಸಣೆ ಶಿಬಿರ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಸುಧಾಕರ ಶೆಟ್ಟಿ, ಜಿ.ಆರ್. ಭಟ್, ರವಿ ದಂಡಿನ, ಅರವಿಂದ ಕಟಗಿ, ಡಾ. ಜಿ.ಬಿ. ಸತ್ತೂರ, ಡಾ. ರವಿ ಕಲಘಟಗಿ ಮಾತನಾಡಿದರು.

ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಎಸ್. ಜಿ. ಹಿರೇಗೌಡರ, ಬಿ.ಎಸ್.ಪಾಟೀಲ, ಬಿ.ಬಿ.ಗಂಗಾಧರಮಠ, ಜಗದೀಶ ದ್ಯಾವಪ್ಪನವರ, ವಿಶ್ವನಾಥ ಕೊರವಿ, ಶಿವಾನಂದ ಬೆಂತೂರ, ಪೂಜಾ ಹೊಸಮನಿ, ಸಿ.ಎನ್.ಶ್ಯಾಗೋಟಿ, ಪ್ರಕಾಶ ಬೆಂಡಿಗೇರಿ, ಶಿವಾನಂದ ಕರಿಗಾರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net