ಹೆಣ್ಣು ಭ್ರೂಣಹತ್ಯೆಯಿಂದ ಲಿಂಗಾನುಪಾತ ಸಮಸ್ಯೆ: ಜಿಲ್ಲಾಧಿಕಾರಿ

udp-30-workshop
Published on

ಉಡುಪಿ: ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂನಿನ ಅಡಿಯಲ್ಲಿ ಅಪರಾಧ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರಿಂದ ಸಾಮಾಜಿಕವಾಗಿ ಅಸಮತೋಲನ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಪಿ.ಸಿ & ಪಿ.ಎನ್​.ಡಿ.ಟಿ ನೋಂದಾಯಿತ ಸಂಸ್ಥೆಗಳ ಮಾಲಿಕರು ಹಾಗೂ ವೈದ್ಯರಿಗೆ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತು ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಲಿಂಗಾನುಪಾತವು 1000 ಗಂಡು ಮಕ್ಕಳಿಗೆ 967 ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳು ಹೊರೆ ಎಂದು ಭಾವಿಸದೇ, ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಇದರಿಂದ ಲಿಂಗಾನುಪಾತದಲ್ಲಿ ಬದಲಾವಣೆ ತರಲು ಸಾಧ್ಯ. ಸ್ಕಾ$ನಿಂಗ್​ ಸೆಂಟರ್​ಗಳು ಪರವಾನಿಗೆ ಹೊಂದಿ, ಅನುಮತಿ ಪಡೆದಿರಬೇಕು. ಭ್ರೂಣವನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡಬಾರದು. ನಿಯಮಾನುಸಾರ ದಾಖಲಾತಿಗಳನ್ನು ಪ್ರತಿದಿನ ನಿರ್ವಹಣೆ ಮಾಡಬೇಕು. ಹೆಣ್ಣು ಅಥವಾ ಗಂಡು ಎಂಬುದನ್ನು ತಿಳಿಸಬಾರದು ಎಂದರು.

ಹೆಣ್ಣು ಭ್ರೂಣ ಪತ್ತೆಹಚ್ಚಿದಲ್ಲಿ ಅವುಗಳ ಹತ್ಯೆ ನಡೆಯುತ್ತಿದ್ದು, ಇದರಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರ ಜೊತೆಗೆ ಹೆಣ್ಣು ಮಕ್ಕಳ ಅಕ್ರಮ ಮಾರಾಟ ಮಾಡುತ್ತಿರುವಂತಹ ಅಕ್ರಮ ಜಾಲವು ಕಾರ್ಯಾಚರಿಸುತ್ತಿದ್ದು, ಇದರ ಕುರಿತು ಜಾಗೃತೆ ವಹಿಸುವುದರೊಂದಿಗೆ, ಹೆಣ್ಣು ಮಕ್ಕಳಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​ ಮಾತನಾಡಿ, ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಇದು ಶೋಚನೀಯ ಸಂಗತಿಯಾಗಿದೆ. ಸ್ಕಾ$ನಿಂಗ್​ ಸೆಂಟರ್​ಗಳಿಗೆ ಅಪ್ರಾಪ್ತ ವಯಸ್ಕರು ಬಂದಲ್ಲಿ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಗರ್ಭಿಣಿಯರು ಭ್ರೂಣದಲ್ಲಿರುವ ಮಗುವು ಹೆಣ್ಣು ಅಥವಾ ಗಂಡು ಮಕ್ಕಳ ಕುರಿತು ತಪಾಸಣೆ ಮಾಡಿಸಿದ್ದಲ್ಲಿ ಇದಕ್ಕೆ ಕಾನೂನಿನಲ್ಲಿ 3 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 5 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 50 ಸಾವಿರ ರೂ. ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಪಿ.ಸಿ. ಮತ್ತು ಪಿ.ಎನ್​.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್​ ಕುಮಾರ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್​ ಉಡುಪ, ಡಾ. ಶಶಿಕಲಾ ಭಟ್​, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net