

ಉಡುಪಿ: ಕರ್ನಾಟಕದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅತ್ಯಂತ ಕ್ರೂರವಾಗಿ ಗೋವುಗಳ ಮೇಲೆ ಭೀಭತ್ಸ ಹಿಂಸೆ ಆಕ್ರಮಣಗಳು ನಡೆಯುತ್ತಿದ್ದು, ಗೋವುಗಳ ಮೇಲೆ ದುರಾಕ್ರಮಣಗೈಯುವವರಿಗೆ ಯಾವುದೇ ಕಾನೂನಿನ ಅಂಕುಶ ಮತ್ತು ಶಿಕ್ಷೆಯಾಗುತ್ತಿಲ್ಲ. ಗೋವುಗಳಿಗೆ ನೆಮ್ಮದಿಯ ಸುರಕ್ಷಿತ ಬದುಕು ಲಭಿಸಲು ಜ. 23 ರಿಂದ 29ರ ತನಕ ನಾಡಿನಾದ್ಯಂತ ಕೋಟಿ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಶಿವಪಂಚಾಕ್ಷರ ಜಪ ಅಭಿಯಾನ ನಡೆಸಲು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
ಯಾವುದೇ ಜಾತಿ ಮತ ಬೇಧವಿಲ್ಲದೇ ಎಲ್ಲ ಜಾತಿ ಸಮುದಾಯಗಳ ಪುರುಷರೂ ಮಹಿಳೆಯರೂ ಗೋವಿನ ಹಾಲು ಕುಡಿದು ಋಣಿಗಳಾಗಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು. ಪ್ರತಿ ಮನೆ ಮನೆಗಳಲ್ಲಿ ಒಂದು ವಾರ ಎಲ್ಲರೂ ಒಟ್ಟಾಗಿ ದೇವರ ಮುಂದೆ ದೀಪ ಇರಿಸಿ ಭಕ್ತಿಯಿಂದ ವಿಷ್ಣುಸಹಸ್ರನಾಮ ಅಥವಾ ಶಿವಪಂಚಾಕ್ಷರ ಜಪವನ್ನು ಪಠಿಸಬೇಕು. ಸಂಘ ಸಂಸ್ಥೆಗಳು ದೇವಸ್ಥಾನಗಳಲ್ಲಿ ಸಾಮೂಹಿಕ ಪಾರಾಯಣ ನಡೆಸಬಹುದು. 29ರಂದು ಪ್ರತಿ ಊರಿನಲ್ಲಿ ಮಠ ಮಂದಿರ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಅಥವಾ ಪಂಚಾಕ್ಷರ ಯಜ್ಞವನ್ನು ನಡೆಸಿ ಅಭಿಯಾನವನ್ನು ಸಂಪನ್ನಗೊಳಿಸಬೇಕು. 25 ರಂದು ಇದೇ ಉದ್ದೇಶಕ್ಕೆ ಎಲ್ಲರೂ ಉಪವಾಸ ವ್ರತ ಆಚರಿಸಬೇಕೆಂದೂ ವಿನಂತಿಸಿದ್ದಾರೆ.