ಮಳೆಗಾಗಿ ಚಂದಮಾಮನ ಮದುವೆ: ಗೂಡೆಹೊಸಹಳ್ಳಿಯಲ್ಲಿ ವಿಶೇಷ ಆಚರಣೆ

1 (2)
Published on

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ರೈತಾಪಿ ಜನರು ಚಂದಮಾಮನ ಮದುವೆ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಿದರು.

ಸಕಾಲಕ್ಕೆ ಮಳೆಯಾಗದಿದ್ದಾಗ ಚಂದಮಾಮನ ಮದುವೆಯನ್ನು ಮಾಡುವ ನಂಬಿಕೆ ಜನರಲ್ಲಿದೆ. ಹಾಗಾಗಿ ಗ್ರಾಮಸ್ಥರು ಚಂದಮಾಮನ ಮದುವೆ ಮಾಡಿ ಮಳೆ ಸುರಿಸುವಂತೆ ವರುಣನಿಗೆ ಮೊರೆ ಇಟ್ಟರು. ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೆ ಆಯ್ಕೆ ಮಾಡಲಾಯಿತು. ವರನಾಗಿ ಸೂರ್ಯದೇವನ ವೇಷದಲ್ಲಿ ದರ್ಶನ್, ವಧುವಾಗಿ ಚಂದ್ರಮತಿಯಂತೆ ಲೋಕೇಶ್ ಮದುಮಗಳಾಗಿ ಸಜ್ಜಾದರು. ಲೋಕೇಶ್‌ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಸಿಂಗರಿಸಿದರು.

ಮನೆ ಮನೆಯಿಂದ ಮಕ್ಕಳು ರೊಟ್ಟಿ ಹಿಟ್ಟನ್ನು ತಂದು ಒಂದೆಡೆ ಸೇರಿಸಿ ರೊಟ್ಟಿ ತಯಾರಿಸಿದರು. ರೊಟ್ಟಿಯ ಮೇಲೆ ಚಂದಿರನ ಚಿತ್ತಾರ ಬಿಡಿಸಿದರು. ಪರಸ್ಪರ ರೊಟ್ಟಿ ಕಸಿಯಲು ಯತ್ನಿಸಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ ಬಾರೋ ಮಳೆರಾಯ ಎಂದು ಕರೆದರು.

ಐದು ದಿನಗಳ ಕಾಲ ನಿತ್ಯ ಸಂಜೆ ಮದುವೆ ಶಾಸ್ತ್ರ, ತಿಂಗಳ ಮಾಮನ ಪೂಜೆ, ರೊಟ್ಟಿ ತಯಾರಿಸಿ ಪ್ರಸಾದ ರೂಪದಲ್ಲಿ ವಿತರಿಸುವುದು ನಡೆಯಿತು. ಗ್ರಾಮದ ಪ್ರವೇಶದ್ವಾರದ ಮಾರಮ್ಮ ಗುಡಿ ಬಳಿ ರೊಟ್ಟಿ ತಯಾರಿಸಿದವರಿಗೆ ಮಡಿಸ್ನಾನ ಮಾಡಿಸಲಾಯಿತು.

ಗುಡಿಯ ಕರಿಕಲ್ಲು ಬಳಿ ದೇಗುಲ ಪ್ರದಕ್ಷಿಣೆ ಹಾಕಿ ನಿತ್ಯ ದೇವರನ್ನು ಮಳೆಗೆ ಪ್ರಾರ್ಥಿಸಿದರು. ಗ್ರಾಮದಲ್ಲಿ ಮದುವೆ ಸಮಾರಂಭದಂತೆ ನಗುತ್ತ ವಿವಿಧ ಶಾಸ್ತ್ರ, ತಾಳಿ ಶಾಸ್ತ್ರ ನೆರವೇರಿಸಿ, ವಧು-ವರರಿಗೆ ತಿಂಗಳಮಾಮ(ಚಂದ್ರ)ನನ್ನು ತೋರಿಸಲಾಯಿತು.

ರಾಜು, ಹೇಮಂತ್, ಮುರಳಿ ಅವರಿಂದ ಕೋಲಾಟ ನಡೆಯಿತು. ಕಳಸ ಶಾಸ್ತ್ರ, ಆಂಜನೇಯ ದೇಗುಲದಿಂದ ವೆಂಕಟೇಶ್ವರ ದೇಗುಲದವರಿಗೆ ಮೆರವಣಿಗೆ ಮಾಡಲಾಯಿತು. ಹೇಮಂತ್, ಕುಮಾರ್, ರಾಜು, ಸಚಿನ್, ಚೇತನ್, ಶರತ್, ಮಂಜುಳಮ್ಮ, ಚಂದ್ರಮ್ಮ, ಸುಶೀಲಮ್ಮ, ಲಕ್ಷ್ಮಮ್ಮ, ಅನಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net