ಯೋಧರಿಗೆ ಮತ್ತಷ್ಟು ಶಕ್ತಿ ಸಿಗಲೆಂದು ಪ್ರಾರ್ಥನೆ

10 CRP-1A
ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರ ಒಳಿತಿಗಾಗಿ ಪ್ರಾರ್ಥಿಸಿ ಪಟ್ಟಣದ ವಿವಿಧ ಹಿಂದು ಪರ ಸಂಘಟನೆಗಳು ಹಾಗೂ ದೇಶಾಭಿಮಾನಿಗಳು ಮತ್ತು ಸಮಸ್ತ ಜನತೆ ಪರವಾಗಿ ಭಾರತೀಯ ಯೋಧರಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಸುದರ್ಶನ ಹೋಮ ಹಾಗೂ ಹೋಮ, ವಿಶೇಷ ಪೂಜೆ ನಡೆಸಲಾಯಿತು.
Published on

ಚನ್ನರಾಯಪಟ್ಟಣ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ ಭಾರತೀಯ ಸೇನಾ ಪಡೆಯ ಒಳಿತಿಗಾಗಿ ಪ್ರಾರ್ಥಿಸಿ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದ 40 ಅಡಿ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಶ್ರೀ ವಿನಾಯಕ ಕಾರು ಚಾಲಕರ ಕ್ಷೇಮಾಭಿವೃದ್ಧಿ ಸಂಘ, ಕೆಂಪೇಗೌಡ ವೇದಿಕೆ, ವಿಶ್ವ ಹಿಂದು ಪರಿಷತ್ತು, ಬಜರಂಗದಳ, ಮಾಜಿ ಸೈನಿಕರ ಸಂಘ, ಹಿಂದು ಕಮಾಂಡರ್ಸ್, ಇಂಡಿಯನ್ ಕ್ರಿಕೆಟರ್ಸ್, ಆರ್.ಕೆ.ಆರ್ ಯುವ ವೇದಿಕೆ, ಹಿಂದು ಪರ ಸಂಘಟನೆಗಳ ಪದಾಧಿಕಾರಿಗಳು ಸಮಸ್ತ ಜನತೆ ಪರವಾಗಿ ಪೂಜೆ ಸಲ್ಲಿಸಿದರು. ಭಾರತೀಯ ಯೋಧರಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಸುದರ್ಶನ ಹೋಮ ಹಾಗೂ ವಿಶೇಷ ಪೂಜೆ ನಡೆಸಲಾಯಿತು.

ಸೈನಿಕರ ಶಕ್ತಿಗಾಗಿ ಹೋಮ: ಭಾರತೀಯ ಸೇನೆಯ ಬಲವರ್ಧನೆಗೆ ಆಶಿಸಿ ವಿಶ್ವನಾಥ್ ದೀಕ್ಷಿತ್ ನೇತೃತ್ವದಲ್ಲಿ ನಾಡಿಗೆ, ನಮ್ಮನ್ನು ರಕ್ಷಿಸುವ ಸೈನ್ಯಕ್ಕೆ ಬಲ ನೀಡಲಿ ಎಂದು ಸುದರ್ಶನ ಹೋಮ ನಡೆಸಲಾಯಿತು. ಶತ್ರುಗಳ ಸಂಹಾರದ ಜತೆಗೆ ಸೈನಿಕರ ಶಕ್ತಿಗಾಗಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಧಾನ ಅರ್ಚಕ ವಿಶ್ವನಾಥ್ ದೀಕ್ಷಿತ್ ಮಾತನಾಡಿ, ಭಾರತೀಯ ಸೈನಿಕರ ಒಳಿತಿಗಾಗಿ ಶತ್ರು ಸಂಹಾರಕ್ಕಾಗಿ ಸುದರ್ಶನ ಹೋಮ ನಡೆಸಲಾಗಿದೆ. ಸೈನ್ಯಕ್ಕೆ ಬಲ ಸಿಗಲಿ. ಉಗ್ರರ ಸಂಹಾರ ಆಗಲಿ ಎಂದು ಪ್ರಾರ್ಥಿಸಲಾಗಿದೆ.

ಉಗ್ರರು 26 ಜನರನ್ನು ಕೊಂದಿದ್ದಾರೆ. ಪ್ರಧಾನಿ ಮೋದಿ ಅವರು ಅದಕ್ಕೆ ಪ್ರತೀಕಾರವಾಗಿ ಸಿಂಧೂರದ ಹೆಸರಿಂದ ದಾಳಿ ಮಾಡಿದ್ದಾರೆ. ನಾವು ಹಣೆಗೆ ತಿಲಕ, ಸಿಂಧೂರ ಹಚ್ಚುತ್ತೇವೆ. ನಮ್ಮ ಹೆಣ್ಣು ಮಕ್ಕಳ ಸಿಂಧೂರ ತೆಗೆಯಲು ಬಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರು ಮಹಾ ಸಂಹಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಮಾತನಾಡಿ, ಆಪರೇಷನ್ ಸಿಂಧೂರ ಯಶಸ್ವಿಗೆ ಪ್ರಾರ್ಥಿಸಿ, ದೇಶ ಕಾಯುವ ಯೋಧರಿಗೆ ಯಾವುದೇ ತೊಂದರೆ ಆಗದಂತೆ ಕಾಪಾಡುವಂತೆ ಪ್ರಾರ್ಥಿಸಿ ಆಂಜನೇಯನ ಸನ್ನಿಧಿಯಲ್ಲಿ ಸಂಕಲ್ಪದೊಂದಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಗಿದೆ. ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಿ ಕರುಣಿಸಲಿ ಎಂದು ಸುದರ್ಶನ ಹೋಮವನ್ನು ವಿಶೇಷ ಸಂಕಲ್ಪದೊಂದಿಗೆ ನೆರೆವೇರಿಸಲಾಯಿತು ಎಂದು ತಿಳಿಸಿದರು.

ವಿವಿಧ ಸಂಘಟನಗಳ ಮುಖಂಡರಾದ ಚ.ನಾ.ಅಶೋಕ್, ಇಂಡಿಯನ್ ಕ್ರಿಕೆಟರ್ ನವೀನ್, ಮಾಜಿ ಸೈನಿಕ ವೆಂಕಟೇಶ್, ಕಾರು ಚಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿಶ್ವ ಹಿಂದು ಪರಿಷತ್ತು, ಬಜರಂಗ ದಳ, ಆರ್‌ಎಸ್‌ಎಸ್ ಮುಖಂಡರು, ಕಾರ್ಯಕರ್ತರು ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net