ದೇಶ ಕಾಯುವ ಯೋಧರನ್ನು ರಕ್ಷಿಸುವ ಪ್ರಾರ್ಥನೆಯಾಗಬೇಕು

kargil
Published on

ಮಡಿಕೇರಿ: ಹಣತೆ ಉರಿಸಿ, ಪುಪ್ಪಗಳನ್ನು ಅರ್ಪಿಸಿ, ದೇಶಭಕ್ತಿಯ ಹಾಡುಗಳೊಂದಿಗೆ ಯೋಧರು, ಹಾಗೂ ಭಾರತ ಮಾತೆಗೆ ಜೈಘೋಷಗಳ ಮೂಲಕ ವಿನೂತನ ರೀತಿಯಲ್ಲಿ ಕೊಡಗು ಪತ್ರಕರ್ತರ ಸಂಘ(ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಶನಿವಾರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ ೭೫ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಅಮರ್ ಜವಾನ್ ಸ್ಮಾರಕದ ಪ್ರತಿಕೃತಿಗೆ ಪುಪ್ಪಾರ್ಚನೆ ಮಾಡಿ, ಹಣತೆ ಬೆಳಗಿ ಯೋಧರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದರು. ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಪೆಮ್ಮಂಡ ಕಾವೇರಪ್ಪ ಅವರ ಪತ್ನಿ ಪೆಮ್ಮಂಡ ಶೋಭಾ ಕಾವೇರಪ್ಪ ದೀಪಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ವಿಕ್ರಂದತ್ತ, ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಹೋರಾಟ ಮಾಡಿದ ಯುದ್ಧವಾಗಿ ಕಾರ್ಗಿಲ್ ಸಮರ ದಾಖಲಾಗಿದೆ. ಆ ಯುದ್ಧದಲ್ಲಿ ಭಾರತದ ಭೂಮಿಯ ಸಂರಕ್ಷಣೆಗಾಗಿ ೫೨೭ ವೀರ ಯೋಧರು ಹುತಾತ್ಮರಾದರು. ಆ ಯೋಧರ ಬಲಿದಾನವನ್ನು ಈ ಕಾರ್ಯಕ್ರಮದ ಮೂಲಕ ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತೀ ದಿನವೂ ನಮ್ಮ ರಕ್ಷಣೆಗಾಗಿ ಶ್ರಮವಹಿಸುತ್ತಿರುವ ಯೋಧರನ್ನು ರಕ್ಷಿಸು ಎಂಬ ಪ್ರಾರ್ಥನೆಯನ್ನು ಎಲ್ಲರೂ ಪ್ರತೀ ದಿನ ಮನೆಗಳಲ್ಲಿ ಮಾಡುವಂತಾಗಬೇಕು. ಆ ಪ್ರಾರ್ಥನೆ ನಮ್ಮೆಲ್ಲರ ದಿನನಿತ್ಯದ ಕರ್ತವ್ಯದಂತಾಗಬೇಕೆಂದು ವಿಕ್ರಂದತ್ತ ಆಶಿಸಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಯೋಧರ ಸ್ಮರಣೆಯಲ್ಲಿ ಆಯೋಜಿಸುವ ಯಾವುದೇ ಕಾರ್ಯಕ್ರಮಗಳು ಕೆಲವು ದಿನಗಳಲ್ಲಿ ಮರೆತುಹೋಗಬಹುದು. ಆದರೆ, ದೇಶರಕ್ಷಣೆಯಲ್ಲಿ ತಮ್ಮ ಎಲ್ಲ ಸುಖಸಂತೋಷವನ್ನೇ ತ್ಯಾಗ ಮಾಡುವ ಯೋಧರನ್ನು ಮಾತ್ರ ನಾವಂದೂ ಮರೆಯಬಾರದು ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಕಳೆದ ವರ್ಷದಿಂದ ರೋಟರಿ ಮಿಸ್ಟಿ ಹಿಲ್ಸ್ ದೀಪನಮನ ಕಾರ್ಯಕ್ರಮದ ಮೂಲಕ ಯೋಧರಿಗೆ ಗೌರವ ಸಲ್ಲಿಸುವಲ್ಲಿ ನಿರತವಾಗಿದ್ದು, ಪ್ರತೀ ವರ್ಷವೂ ಕಾರ್ಯಕ್ರಮವನ್ನು ಯೋಧರಿಗಾಗಿ ಮೀಸಲಿಡುವುದಾಗಿ ಹೇಳಿದರು.

ವೇದಿಕೆಯಲ್ಲಿದ್ದ ಅಮರ್ ಜವಾನ್ ಸ್ಮಾರಕದ ಪ್ರತಿಕೃತಿಗೆ ೭೫ ಸಂಘಸಂಸ್ಥೆಗಳ ಪ್ರಮುಖರು ಸರದಿ ಸಾಲಿನಲ್ಲಿ ಬಂದು ಪುಪಾರ್ಚನೆ ಮಾಡಿ ಗೌರವ ಸೆಲ್ಯೂಟ್ ಮಾಡುವ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ನೂರಾರು ಮಂದಿ ಹಣತೆಗಳನ್ನು ಬೆಳಗಿ ಅಮರ್ ಜವಾನ್ ಸ್ಮಾರಕದ ಮುಂದೆ ಇಟ್ಟು ಕಾರ್ಗಿಲ್ ಹುತಾತ್ಮರಿಗೆ ಬೆಳಕಿನಾರತಿ ಮೂಲಕ ಶೃದ್ಧಾಂಜಲಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾನಿಕುಟ್ಟೀರ ಕುಟ್ಟಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಹಾಜರಿದ್ದರು. ವಿವಿಧ ಶಾಲಾ, ಕಾಲೇಜುಗಳ ಎನ್‌ಸಿಸಿ ಕೆಡೆಟ್ ಗಳು, ಮಾಜಿ ಯೋಧರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಲ್ಲರಲ್ಲೂ ದೇಶಭಕ್ತಿ ಮೂಡಿದಾಗ ಭಾರತ ಸಮೃದ್ಧ: ಪೊನ್ನಣ್ಣ

ಎಲ್ಲರಲ್ಲೂ ದೇಶಭಕ್ತಿ ಮೂಡಿದಾಗ ಭಾರತ ಸಮೃದ್ಧವಾಗಿರುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ಹೇಳಿದರು.

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಡೆದ ಯೋಧರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ರಕ್ಷಣೆಯಲ್ಲಿ ವೀರ ಯೋಧರ ಕೊಡುಗೆಯನ್ನು ಸ್ಮರಿಸಿದ ಪೊನ್ನಣ್ಣ ವೀರತ್ವಕ್ಕೆ ಕೊಡಗು ಹೆಸರುವಾಸಿಯಾಗಿದೆ. ಕೊಡಗಿನ ಸಾವಿರಾರು ಜನ ಸೈನಿಕರ ಕೊಡುಗೆ ಈ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಬಣ್ಣಿಸಿದರು.

ದೇಶದ ಪ್ರತಿಯೊಬ್ಬರು ದೇಶಭಕ್ತಿಯನ್ನು ಬೆಳೆಸಿಕೊಂಡಲ್ಲಿ, ನಮ್ಮ ನಾಡು, ನಮ್ಮ ದೇಶ ಸಮೃದ್ಧವಾಗುವುದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ದೇಶವನ್ನು ಕಾಯುವ ಯೋಧರನ್ನು ನಾವು ಸದಾ ಸ್ಮರಿಸುತ್ತಾ ಅವರಿಗೆ ಚಿರಋಣಿಯಾಗಿರಬೇಕು. ಕೊಡಗಿನಿಂದ ದೇಶದ ಸೈನ್ಯಕ್ಕೆ ನೀಡಲಾದ ಯೋಧರ ಕೊಡುಗೆ ಬೇರೆ ಯಾವ ರಾಜ್ಯದಿಂದಲೂ ಇಲ್ಲ ಎಂದರು.

ನಮ್ಮ ರಕ್ಷಣೆಗೆ ಸದಾ ಶ್ರಮಿಸುತ್ತಿರುವ ಯೋದರಿಂದಾಗಿಯೇ ನಾವಿಂದು ಹಾಯಾಗಿ ಓಡಾಡುವಂತಾಗಿದೆ. ಯೋಧರ ಕರ್ತವ್ಯ ನಿಷ್ಟೆಯನ್ನು ಎಂದೆಂದೂ ಮರೆಯಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net