ನಮ್ಮೊಳಗಿನ ಪರಿವರ್ತನೆಗೆ ಧರ್ಮಾಚರಣೆ ಅಗತ್ಯ

swarnavallee
Published on

ಶಿರಸಿ: ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಅಂಶಗಳಿರುತ್ತವೆ. ಒಳ್ಳೆಯ ಅಂಶ ಬೆಳೆಯುವಂತೆ ಮಾಡಬೇಕು. ಕೆಟ್ಟದ್ದನ್ನು ನಿಯಂತ್ರಿಸುತ್ತಲೇ ಅವು ಕ್ಷೀಣವಾಗುವಂತೆ ಮಾಡಬೇಕು. ಈ ಕ್ರಮವನ್ನು ಎಲ್ಲರೂ ಅನುಸರಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

ಭರತನಳ್ಳಿ ಸೀಮೆಯ ಶಿಷ್ಯರು ಬುಧವಾರ ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಪರಮಾತ್ಮನ ಸಾಕ್ಷಾತ್ಕಾರ ಮೂಲಕ ಮೋಕ್ಷ ಪಡೆಯಲು ಅಥವಾ ಸ್ವರ್ಗಾದಿ ಲೋಕ ಪಡೆಯುವ ನಿಟ್ಟಿನಲ್ಲಿ ಪರಿವರ್ತನೆ ತಂದುಕೊಳ್ಳಬೇಕು. ಸುಧಾರಣೆಗೆ ಏನೆಲ್ಲ ಪ್ರಯತ್ನ ಮಾಡಬೇಕೋ ಅದೇ ಧರ್ಮಾಚರಣೆ. ನಮ್ಮೊಳಗಿನ ಪರಿವರ್ತನೆಗೆ ಧರ್ಮಾಚರಣೆ ಅಗತ್ಯ ಎಂದರು.

ಎಲ್ಲರ ಮನಸ್ಸು ಬೆಳಗಿನ ವೇಳೆ ಶಾಂತವಾಗಿರುತ್ತದೆ. ಆ ವೇಳೆಯಲ್ಲಿ ಯಾವ ಕೆಲಸ ಕೈಗೆತ್ತಿಕೊಂಡರೂ ಚೆಂದವಾಗಿ ನಡೆಯುತ್ತದೆ. ನಿದ್ದೆಯಿಂದ ಎದ್ದ ಕೆಲ ಕಾಲ, ಬೆಳಗಿನ ವೇಳೆ ಬ್ರಾಹ್ಮೀ ಮುಹೂರ್ತ ಶಾಂತತೆಯ ಕಾಲ. ಆ ವೇಳೆಯನ್ನು ಇನ್ನೂ ವಿಸ್ತಾರ ಮಾಡಿಕೊಳ್ಳಬೇಕು. ಶಾಂತವಾಗಿರುವುದನ್ನು ವಿಸ್ತಾರ ಮಾಡಿಕೊಳ್ಳಬೇಕು. ಬೆಳಗ್ಗೆ ಧರ್ಮರಾಯ, ಮಧ್ಯಾಹ್ನ ಕರ್ಣ, ಸಂಜೆಗೆ ದುಶ್ಯಾಸನ ಎಂದು ಯಾರೋ ಆಡಿದ್ದರು. ಹಾಗೆ ಆಗಬಾರದು ಎಂದರು.

ನಿರಾಹಾರ ಅಥವಾ ಉಪಹಾಸದ ಕ್ರಮ ನಮ್ಮ ಆಚರಣೆಯಲ್ಲಿದೆ. ಉಪವಾಸದಿಂದ ಮನಸ್ಸಿನ ಏಕಾಗ್ರತೆಗೆ ಅನುಕೂಲ ಇದೆ. ಶಾರೀರಕವಾಗಿ ಕೂಡ ನಿಯಮಿತವಾಗಿ ನಿರಾಹಾರ ಮಾಡುವುದರಿಂದ ಶರೀರದ ಕೊಬ್ಬೂ ಕಡಿಮೆ ಆಗುತ್ತದೆ. ಶರೀರಕ್ಕೆ ನಿದ್ದೆ ತಡೆಯುವ ಸಾಮರ್ಥ್ಯ ಕೂಡ ಇರುತ್ತದೆ. ಉಪವಾಸ, ಜಾಗರಣೆ, ಪ್ರಾಣಾಯಾಮ ಅನುಸರಣೆ ನಿಯಮಿತವಾಗಿ ಎಲ್ಲರೂ ಮಾಡಬೇಕು ಎಂದು ಉದಾಹರಣೆ ಸಹಿತ ವಿವರಿಸಿ ಆಲಸ್ಯ, ಅತಿಯಾದ ನಿದ್ದೆ ಕೂಡ ಒಳ್ಳೆಯದಲ್ಲ. ವಾತ, ಪಿತ್ತ, ಕಫಗಳ ನಿರ್ವಹಣೆ ಕೂಡ ಆಹಾರ ನಿಯಮಗಳ ಮೂಲಕ ಮಾಡಿಕೊಳ್ಳಬೇಕು. ಭೋಗದ ಅತಿ ಆಸೆ ಒಳ್ಳೆಯದಲ್ಲ. ಅವುಗಳನ್ನು ನಿಯಂತ್ರಿಸಬೇಕು ಎಂದರು.

ಶ್ರೀಪಾದ ಹೆಗಡೆ ಶಿರ್ನಾಲ, ನಾಗೇಂದ್ರ ಭಟ್ಟ ಹಿತ್ಲಳ್ಳಿ, ನಾರಾಯಣ ಹೆಗಡೆ ಭಟ್ರಕೇರಿ, ಗೀತಾ ಹೆಗಡೆ ಶೀಗೇಮನೆ, ಮೃತ್ಯುಂಜಯ ಹೆಗಡೆ ಚಿಪಗೇರಿ, ಸುರೇಶ ಹೆಗಡೆ ಕೋಸುಗುಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net