

ಲಕ್ಷ್ಮೇಶ್ವರ: ವರಮಹಾಲಕ್ಷ್ಮೀ ವ್ರತಾಚರಣೆಯನ್ನು ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳ ಮಹಿಳೆಯರು ಶುಕ್ರವಾರ ಶ್ರದ್ಧಾ, ಭಕ್ತಿಯಿಂದ ಕೈಗೊಂಡರು.
ಹೆಂಗಳೆಯರು ಮನೆಯ ಮುಂದೆ ಬೆಳಗ್ಗೆ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು.
ಮನೆಯ ದೇವರ ಜಗುಲಿ, ಮನೆಯ ಮುಖ್ಯ ಸ್ಥಳದಲ್ಲಿ ವರಮಹಾಲಕ್ಷ್ಮೀ ಪೂಜೆಗೆ ಮಂಟಪ ಸಿದ್ಧಗೊಳಿಸಿ, ಹಳದಿ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ, ಮಾಡಿ ಅದಕ್ಕೆ ಆಭರಣಗಳನ್ನು ಹಾಕಿದ ತೆಂಗಿನಕಾಯಿಯಿಂದ ಕಳಸ(ಲಕ್ಷ್ಮೀದೇವಿ) ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಹಣ್ಣು- ಹೂವು, ಅರಿಷಿಣ- ಕುಂಕುಮ ನೀಡಿ ಉಡಿ ತುಂಬಲಾಯಿತು.
ಲೋಕ ಕಲ್ಯಾಣ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಗಾಗಿ ವರಮಹಾಲಕ್ಷ್ಮೀಗೆ ಮೊರೆ ಇಡುವುದೇ ಈ ಹಬ್ಬದ ಮಹತ್ವವಾಗಿದೆ. ಪೂಜೆ ಕೇವಲ ಐಶ್ವರ್ಯ ಪ್ರಾಪ್ತಿಗಷ್ಟೇ ಅಲ್ಲದೇ ಸಮಾಜ ಮತ್ತು ಕುಟುಂಬದ ಶ್ರೇಯೋಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಮಾಡುವಂತದ್ದಾಗಿದೆ. ಇದು ಆತ್ಮಸಂತೃಪ್ತಿ ನೀಡುತ್ತದೆ ಎನ್ನುತ್ತಾರೆ ವ್ರತಾಚರಣೆ ಕೈಗೊಂಡಿದ್ದ ಲೀಲಾ ಸಂಶಿ, ನಿರ್ಮಲಾದೇವಿ ಪವಾಡದ, ಹೇಮಾ ಬಾಳಿಕಾಯಿ, ಶೃತಿ ಮೆಣಸಿನಕಾಯಿ.
ಹಬ್ಬದ ಹಿನ್ನೆಲೆ ಪಟ್ಟಣದಲ್ಲಿ ಶುಕ್ರವಾರವೂ ಹೂವು-ಹಣ್ಣು, ಪೂಜಾ ಸಾಮಗ್ರಿ, ಬಟ್ಟೆ, ಆಭರಣದ ವ್ಯಾಪಾರ ಜೋರಾಗಿಯೇ ನಡೆಯಿತು.