ಮಳೆಗಾಗಿ ಪ್ರಾರ್ಥಿಸಿ ಕಪ್ಪೆ, ಮಣ್ಣಿನ ದೇವರ ಮೂರ್ತಿಗೆ ಪೂಜೆ

18 HANUR 6
ಮುಖಂಡರಾದ ಮುತ್ತುರಾಜು, ವೆಂಕಟರಮಣಶೆಟ್ಟಿ, ತಮ್ಮಯ್ಯಶೆಟ್ಟಿ, ಮುನಿಸ್ವಾಮಿ, ಕೃಷ್ಣಶೆಟ್ಟಿ, ಪಳನಿಶೆಟ್ಟಿ ಹಾಗೂ ಇನ್ನಿತರರು ಇದ್ದರು. ಕುರಟ್ಟಿ ಹೊಸೂರು ಗ್ರಾಮದ ಕೆರೆಯಲ್ಲಿ ಗ್ರಾಮಸ್ಥರು ಮಳೆಗಾಗಿ ಕಪ್ಪೆ ಹಾಗೂ ಮಣ್ಣಿನ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
Published on

ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಮಳೆಗಾಗಿ ಕಪ್ಪೆ ಹಾಗೂ ಮಣ್ಣಿನ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.

ತಾಲೂಕು ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ರೈತರು ಖುಷ್ಕಿ ಜಮೀನನ್ನು ಹೊಂದಿದ್ದು, ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಪ್ರಸ್ತುತ ರಾಗಿ ಹಾಗೂ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದ್ದು, ಪೈರುಗಳು ಸಹ ಬಂದಿದೆ. ಆದರೆ ಕಳೆದ 15 ದಿನಗಳಿಂದ ಮಳೆಯಾಗದ ಪರಿಣಾಮ ಪೈರುಗಳು ಬಿಸಿಲಿನ ತಾಪಕ್ಕೆ ಒಣಗುತ್ತಿವೆ. ಇತ್ತ ಕೆರೆ-ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ವರುಣ ಕೃಪೆ ತೋರಿ ಮಳೆ ಸುರಿದರೆ ಉತ್ತಮ ಫಸಲು ಪಡೆಯಬಹುದಾಗಿದೆ. ಮಳೆಯಾಗದ ವರ್ಷದಲ್ಲಿ ಗ್ರಾಮಸ್ಥರು ಒಟ್ಟಿಗೆ ಸೇರಿ ಕಪ್ಪೆ ಹಾಗೂ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆಯೇ ಮಧ್ಯಾಹ್ನ ಗ್ರಾಮದ ಕೆರೆಯಲ್ಲಿ ಮಣ್ಣಿನಿಂದ ತಯಾರಿಸಿದ ದೇವರ ಮೂರ್ತಿ ಹಾಗೂ ಕಪ್ಪೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮಸ್ಥರೊಂದಿಗೆ ಮುತ್ತುರಾಜು ಎಂಬುವರು ಕಪ್ಪೆ ಹಾಗೂ ದೇವರ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ನೆರೆದಿದ್ದವರು ‘ಉಯ್ಯೋ ಉಯ್ಯೋ ಮಳೆರಾಯ, ಬಾಳೆ ತೋಟಕ್ಕೆ ನೀರಿಲ್ಲ…‘ ಎಂದು ಘೋಷಣೆ ಕೂಗಿದರು. ಬಳಿಕ ಕೆರೆ ಏರಿಗೆ ಆಗಮಿಸಿ ಗ್ರಾಮಸ್ಥರು ನೀಡಿದ್ದ ರಾಗಿ ಹಿಟ್ಟಿನಿಂದ ಅಂಬಲಿ ತಯಾರಿಸಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net