ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಸೇವೆ

12 TKE 1
ತರೀಕೆರೆ ತಾಲೂಕಿನ ಪಿರಮೇನಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಸೇವೆ ಸಲ್ಲಿಸಲಾಯಿತು.
Published on

ತರೀಕೆರೆ: ಹನಿ ನೀರಿಗೂ ಪರದಾಡಿ ಮುಗಿಲತ್ತ ದೃಷ್ಟಿ ನೆಟ್ಟಿರುವ ತಾಲೂಕಿನ ಪಿರಮೇನಹಳ್ಳಿ ಗ್ರಾಮಸ್ಥರು ಭಾನುವಾರ ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಸೇವೆ ಮಾಡಿದರು. ಬಾಲಕರಿಬ್ಬರಿಗೆ ತಣ್ಣೀರು ಸ್ನಾನ ಮಾಡಿಸಿ ಮಳೆಗಾಗಿ ಕಪ್ಪೆ ಸೇವೆಗೆ ಸಜ್ಜುಗೊಳಿಸಿದ ಗ್ರಾಮಸ್ಥರು ಗ್ರಾಮದ ಶ್ರೀ ಸಂತ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜೀವಂತ ಕಪ್ಪೆಗಳನ್ನು ಸಂಪ್ರದಾಯದಂತೆ ವಿವಿಧ ಸೊಪ್ಪುಗಳಿಂದ ಸಿಂಗಾರಗೊಳಿಸಿದ್ದ ಪೂಜಾ ದಂಡಿಗೆ ಕಟ್ಟಲಾಯಿತು. ದಂಡ ಹಿಡಿದ ಬಾಲಕರು ಮತ್ತು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದರು. ಗ್ರಾಮದ ಪ್ರತಿ ಮನೆಗಳ ಮುಂದೆಯೂ ಕಪ್ಪೆಗಳಿಗೆ ಪೂಜೆ ಸಲ್ಲಿಸಲಾಯಿತು. ದೇವರಿಗೆ ನೈವೇದ್ಯ ಅರ್ಪಿಸುವ ಸಲುವಾಗಿ ಪ್ರಸಾದ ತಯಾರಿಸಲು ಬೇಕಾದ ಅಕ್ಕಿ, ಕಾಯಿ, ಬೇಳೆ, ರಾಗಿಹಿಟ್ಟು ಇನ್ನಿತರ ಮೀಸಲು ಸಂಗ್ರಹಿಸಿ ಜೋಳಿಗೆ ತುಂಬಿಸಿಕೊಂಡರು.
ಕಪ್ಪೆ ಸೇವೆ ಮುಗಿದ ಬಳಿಕ ಮನೆ, ಮನೆಯಿಂದ ಸಂಗ್ರಹಿಸಿದ್ದ ಮೀಸಲು ವಸ್ತುಗಳಿಂದ ಗ್ರಾಮದ ಹೊರವಲಯದಲ್ಲಿ ಅನ್ನ, ಸಾರು, ಮುದ್ದೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ನೆರೆದಿದ್ದ ಎಲ್ಲರಿಗೂ ಪ್ರಸಾದ ಹಂಚಲಾಯಿತು.
ಗ್ರಾಮಸ್ಥ ಬಾಬ್ಲಾನಾಯ್ಕ ಮಾತನಾಡಿ, ಕಪ್ಪೆ ಸೇವೆ ಮಾಡಿ ಪ್ರಾರ್ಥನೆ ಸಲ್ಲಿಸಿದರೆ, ಮಳೆಯಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದು ಬಂದಿದೆ. ಈ ಹಿಂದೆ ಸೇವೆ ಸಲ್ಲಿಸಿ ದೇವರಿಗೆ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸುವುದರಷ್ಟರಲ್ಲಿಯೇ ಗುಡುಗು, ಮಿಂಚು ಸಹಿತ ಹದ ಮಳೆಯಾಗಿರುವ ಉದಾಹರಣೆ ಕೂಡ ಇದೆ. ದೈವಾನುಗ್ರಹದಿಂದ ಮಳೆಯಾದರೆ ಕುಡಿಯುವ ನೀರಿನ ಸಮಸ್ಯೆ ಜತೆ ರೈತರ ಬವಣೆ ನೀಗಲಿದೆ ಎಂದರು.
ವಾಲ್ಯಾನಾಯ್ಕ, ಪಿ.ರುದ್ರಾನಾಯ್ಕ, ಪಿ.ಕೆ.ಶಿವಕುಮಾರ, ಡಿ.ನಾಗರಾಜ, ಆರ್.ರವಿನಾಯ್ಕ, ಪುಟ್ಟಪ್ಪ, ಜಯಣ್ಣ, ಗೌರಮ್ಮ, ಗಂಗಮ್ಮ, ವಿನೋದಬಾಯಿ, ಸವಿತಾ, ಮಂಜುಳಾ, ಕಿರಣ್‌ನಾಯ್ಕ ಇತರರಿದ್ದರು.

ತಣ್ಣೀರ ಅಭಿಷೇಕ
ಪೂಜಾ ದಂಡಕ್ಕೆ ವಿವಿಧ ಬಗೆಯ ಸೊಪ್ಪು ಮತ್ತು ಹೂವುಗಳಿಂದ ಅಲಂಕಾರಗೊಳಿಸುವುದಲ್ಲದೇ, ಜೀವಂತ ಕಪ್ಪೆಯನ್ನು ದಂಡದ ಮಧ್ಯ ಭಾಗಕ್ಕೆ ಕಟ್ಟಲಾಗುತ್ತದೆ. ಪ್ರತಿ ಮನೆಗೆ ಹೋದಾಗೆಲ್ಲವೂ ಬಾಲಕರ ಮೈ ಮತ್ತು ಕಪ್ಪೆಯ ಮೇಲೆ ತಣ್ಣೀರು ಸುರಿಯಲಾಗುತ್ತದೆ. ತಣ್ಣೀರು ಸುರಿದ ಬಳಿಕ ಕುಣಿಯುತ್ತ ಮಂತ್ರ ಪಠಿಸುವ ಬಾಲಕರು ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net