ಮಳೆಗಾಗಿ ಪ್ರಾರ್ಥಿಸಿ ಶಿವನ ದೇವಾಲಯದಲ್ಲಿ ಪರ್ಜನ್ಯ ಜಪ

16-GPT-1A
ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪದ ಕಲ್ಲುಕಟ್ಟೆ ಜಲಾಶಯದಲ್ಲಿ ಮಳೆಗಾಗಿ ಪರ್ಜನ್ಯ ಜಪ ಮಾಡಲಾಯಿತು.
Published on

ಗುಂಡ್ಲುಪೇಟೆ: ಶಿವಪುರ ಸಮೀಪದ ಕಲ್ಲುಕಟ್ಟೆ ಜಲಾಶಯದಲ್ಲಿರುವ ಶಿವನ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಅರಿಶಿಣ ಬೆಳೆಗಾರರ ಒಕ್ಕೂಟದ ನೂರಾರು ಸದಸ್ಯರು ಎಸ್.ಎಂ.ನಾಗಾರ್ಜುನಕುಮಾರ್ ನೇತೃತ್ವದಲ್ಲಿ ಪರ್ಜನ್ಯ ಜಪ ಹಾಗೂ ರುದ್ರಾಭಿಷೇಕ ಪೂಜೆ ನೆರವೇರಿದರು.

ಕುಂದಕೆರೆ ಸಂಪತ್ತು, ವೀರನಪುರ ನಾಗರಾಜು, ಸರ್ವೇಶ್, ಅಭಿಷೇಕ್, ಶಶಿ, ಶ್ಯಾನಾಡ್ರಹಳ್ಳಿ ಬಸವರಾಜು, ನಾಗೇಂದ್ರ ಸೇರಿದಂತೆ ನೂರಾರು ಸದಸ್ಯರು ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭೀಕರ ಬರಗಾಲ ಎದುರಾಗಿದ್ದರೂ ಕೆರೆಗಳಿಗೆ ನೀರು ತುಂಬಿಸಿಲ್ಲ. ಅಲ್ಲದೆ ಭೀಕರ ಬರಗಾಲ ತಾಂಡವವಾಡುತ್ತಿರುವ ಇಂತಹ ತುರ್ತು ಪರಿಸ್ಥಿತಿಯಲ್ಲಿಯೂ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದು ಇದು ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಆದ್ದರಿಂದ ತುರ್ತಾಗಿ ಕೆರೆಗಳಿಗೆ ನೀರು ತುಂಬಿಸಬೇಕು. ಜತೆಗೆ ಜಿಲ್ಲಾಧಿಕಾರಿಗಳ ಸಭೆಗೆ ರೈತರನ್ನೂ ಕರೆಯಬೇಕು ಎಂದು ಕೋರಿದರು.

ಸಂಘಟನೆ ಅಹವಾಲು ಆಲಿಸಿ ಮಾತನಾಡಿದ ತಹಸೀಲ್ದಾರ್ ಮಂಜುನಾಥ್, ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಏ17 ರಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿಗಳು ಸಭೆ ನಡೆಸಲಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net