ಕಗತೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಂತೆಭಿಕ್ಷೆ

mkg
Published on

ಚನ್ನಗಿರಿ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಕಗತೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಕೃಪೆಯಂತೆ ಕಂತೆ ಭಿಕ್ಷೆ ಮಾಡುವ ಮೂಲಕ ದೇವರಿಗೆ 101 ಸಲ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದ ಮಠದ ಸಿದ್ದಯ್ಯ ಮಾತನಾಡಿ, ಗ್ರಾಮದ ಪ್ರತಿ ಮನೆಯಲ್ಲಿ ಕಂತೆಭಿಕ್ಷೆ ಮಾಡಿ, ದೇವರಿಗೆ ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬ ವಾಡಿಕೆ ಇದೆ. ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಗ್ರಾಮಸ್ಥರಿಗೆ ಪ್ರಸಾದ ವಿತರಿಸಲಾಗುತ್ತದೆ ಎಂದರು.
ಕಳೆದ ಸಾಲಿನಲ್ಲಿ ಮುಂಗಾರು ಪ್ರಾರಂಭವಾಗುವ ಮೊದಲೇ ಮಳೆ ಸುರಿದು ಕರೆ ಕಟ್ಟೆಗಳು ತುಂಬಿದ್ದವು. ಈ ಬಾರಿ ಮುಂಗಾರು ಮುಗಿಯುತ್ತ ಬಂದರೂ ವರುಣ ಕೃಪೆ ತೋರುತ್ತಿಲ್ಲ. ಇದರಿಂದ ರೈತರು ಬಿತ್ತನೆ ಮಾಡಲು ಬೀಜ, ಗೊಬ್ಬರ ತಂದಿಟ್ಟುಕೊಂಡಿದ್ದು, ಮಳೆ ಬರದಿದ್ದರೆ ಅವು ಹಾಗೆಯೇ ಉಳಿಯುತ್ತವೆ ಎಂದು ಹೇಳಿದರು.

ಜನರ ಸಂಕಷ್ಟ ಬಗೆಹರಿಸುವ ಶಕ್ತಿ ಇರುವುದು ದೇವರಿಗೆ ಮಾತ್ರ. ಆದ್ದರಿಂದ ದೇವರ ಮೊರೆ ಹೋಗುವಂತಾಗಿದ್ದು, ಲೋಕದ ಕಲ್ಯಾಣಕ್ಕಾಗಿ ಉತ್ತಮ ವರುಣ ದೇವ ಕರುಣೆ ತೋರಿಸಬೇಕು ಎಂದರು.
ಮಠದ ವೀರಯ್ಯ, ಗ್ರಾಮದ ಮುಖಂಡರಾದ ಓಂಕಾರಪ್ಪ, ಮರುಳಸಿದ್ದಪ್ಪ, ಶಿಕ್ಷಕ ಲಿಂಗರಾಜು, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net