

ಕೊಪ್ಪಳ: ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ. ನಮ್ಮ ಬದುಕು ರೂಪಿಸುವವರು ಶಿಕ್ಷಕರು. ಸದ್ಯದ ಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟವಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ನಗರದ ಎಂಪಿ ಪ್ಯಾಲೇಸ್‌ನಲ್ಲಿ ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಿಟ್ಟಿದ್ದಾರೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜನ್ಮ ದಿನವನ್ನು ದೇಶಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ.
ಉಳಿದೆಲ್ಲರನ್ನು ಸೃಷ್ಠಿಸುವ ಶಿಲ್ಪಿ ಶಿಕ್ಷಕ. ಯಾರು ಯಾವ ಅಧಿಕಾರಿಯಾದರೂ ಆಗಬಹುದು. ಶಿಕ್ಷಕರಾಗುವ ಭಾಗ್ಯ ಎಲ್ಲಿಗೂ ದೊರೆಯುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನೇಕ ಸವಾಲುಗಳಿವೆ.
ನಿಮ್ಮ ಮನವಿ ನೀಡಿದ್ದೀರಿ. ಈಬಗ್ಗೆ ಸಿಎಂ ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲು ಯತ್ನಿಸಲಾಗುವುದೆಂದು ತಿಳಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಶಿಕ್ಷಕರು ದೇಶದ ನಿರ್ಮಾಪಕರು. ನೀವೆಲ್ಲ ಗುಣಮಟ್ಟದ ಶಿಕ್ಷಣ ನೀಡಬೇಕು. ಎಸ್ಸೆಸ್ಸೆಲ್ಸಿಯಲ್ಲಿ ನಮ್ಮ ಜಿಲ್ಲೆ 16ನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ಬರುವಲ್ಲಿ ನಿಮ್ಮ ಕೊಡುಗೆಯೂ ಇರಲಿ. ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದರೂ ಉತ್ತಮ ಫಲಿತಾಂಶ ಪಡೆಯುವಲ್ಲಿ ಎಡವಿದ್ದೇವೆ. ಅದನ್ನು ಸರಿಪಡಿಸುವ ಕೆಲಸವಾಗಲಿ. ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದರು.
ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಪ್ರಮುಖರಾದ ಗಿರೀಶ ಕಣವಿ, ಪ್ರಹ್ಲಾದ ಅಗಳಿ, ಕೃಷ್ಣಾ ಇಟ್ಟಂಗಿ, ಕೃಷ್ಣ ಕಬ್ಬೇರ, ಡಾ.ಶ್ರೀನಿವಾಸ ಹ್ಯಾಟಿ, ಶಿವಕುಮಾರ ಕುಕನೂರು, ಹುಲುಗಪ್ಪ ಕಟ್ಟಿಮನಿ, ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಇದ್ದರು.