

ಪುತ್ತೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ, ಚಿಕನ್ ಸ್ಟಾಲ್ ಮಾಲಕ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ಸ್ವಯಂ ಪ್ರೇರಿತ ಬಂದ್ ಆಗಿದ್ದು, ಬೊಳುವಾರ್ ನಲ್ಲಿ ಸರ್ಕಾರಿ ಬಸ್ ಗೆ ಕಲ್ಲೆಸೆಯಲಾಗಿದೆ. ಎಲ್ಲ ಕಡೆ ಬಿಗು ಪೊಲೀಸ್ ಬಂದೋಬಸ್ತು ಮಾಡಲಾಗಿದೆ.
ಜಿಲ್ಲಾಧಿಕಾರಿ ಭೇಟಿ: ನಿನ್ನೆ ತಡ ರಾತ್ರಿ 1.30 ರ ಸುಮಾರಿಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿಯವರು ಪ್ರಗತಿ ಆಸ್ಪತ್ರೆಗೆ ಆಗಮಿಸಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು.
ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿನ ಶಿಕ್ಷೆಯನ್ನು ಕೊಡಿಸಲಾಗುವುದು. ಈಗಾಗಲೇ ಪೊಲೀಸ್ ಇಲಾಖೆ ಇದರ ತನಿಖೆಯಲ್ಲಿ ತೊಡಗಿಸಿಕೊಂಡಿದೆ. ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕೆಂಬ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು , ಅದನ್ನು ಕೊಡಿಸಲು ಪ್ರಾಮಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಡಿಸಿಯವರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಮೆರವಣಿಗೆ: ಇಂದು ಬೆಳಗ್ಗೆ 9.30 ಕ್ಕೆ ಪುತ್ತೂರು ನಗರದಿಂದ ಮೆರವಣಿಗೆಯಲ್ಲಿ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆ ಗೆ ಪ್ರವೀಣ್ ಅವರ ಮೃತದೇಹವನ್ನು ಕೊಂಡೊಯ್ಯಲು ಹಿಂದೂ ಸಂಘಟನೆಗಳು ಹಾಗೂ ಬಂಧು ಬಳಗದವರು ನಿರ್ಧರಿಸಿದ್ದಾರೆ.
ಬಂದ್ ಗೆ ಬೆಂಬಲಿಸಿ ಅಂಬಿಕಾ ಹಾಗೂ ವಿವೇಕಾನಂದ ವಿದ್ಯಾ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.