ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ತಲೆಮರೆಸಿಕೊಂಡವರ ಸುಳಿವು ನೀಡಿದರೆ ನಗದು ಬಹುಮಾನ

mng--27 Oct NIA
Published on

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳ ಸಂಚಿಗೆ ಬಲಿಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಹುಡುಕಾಟದಲ್ಲಿರುವ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಇದೀಗ ಮೂವರು ಆರೋಪಿಗಳ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ.


ಕೊಡಗಿನ ಸೋಮವಾರಪೇಟೆಯ ಅಬ್ದುಲ್ ನಾಸಿರ್ (41), ಬೆಳ್ತಂಗಡಿ ಪಡಂಗಡಿಯ ನೌಷಾದ್ (32) ಹಾಗೂ ಸೋಮವಾರ ಪೇಟೆಯ ಅಬ್ದುಲ್ ರಹಮಾನ್ (36) ಹೆಸರು ಇದೆ. ಈ ಮೂವರ ಬಗ್ಗೆ ಮಾಹಿತಿ ಕೊಟ್ಟವರಿಗೆ ತಲಾ ಎರಡು ಲಕ್ಷ ರೂ. ಘೋಷಣೆ ಮಾಡಲಾಗಿದೆ.


2022 ಜುಲೈ 26ರಂದು ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎನ್‌ಐಎ ಈಗಾಗಲೇ ನಿಷೇಧಿತ ಸಂಘಟನೆ ಪಾಪ್ಯುಲರ್ ಪ್ರಿಂಟ್ ಆಫ್ ಇಂಡಿಯಾ (ಪಿಎಫ್‌ಐ)ನ ಹಲವಾರು ಮಂದಿಯನ್ನು ಎನ್‌ಐಎ ಬಂಧಿಸಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಕೆಲವರು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನೂ ಕೆಲವರು ದೇಶದ ಒಳಗೆಯೇ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‌ಐಎ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇವರೆಲ್ಲರೂ ಶಾಮೀಲಾಗಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಘಟನೆ ಬಳಿಕ ಇವರೆಲ್ಲರೂ ತಲೆಮರೆಸಿದ್ದು, ಇವರ ಬಂಧನಕ್ಕೆ ಈಗ ಬಹುಮಾನ ಸಹಿತ ವಾರಂಟ್ ಹೊರಡಿಸಲಾಗಿದೆ. ಇಲ್ಲಿವರೆಗೆ ಈ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net