

ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ನೆಟ್ಟಾರ ಗ್ರಾಮದ ಹಿಂದು ಮುಖಂಡ ಪ್ರವೀಣ ಹತ್ಯೆ ಖಂಡನೀಯ. ಹಿಂದುಗಳ ಸಮಾಧಿ ಮೇಲೆ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಕಾರ್ಯಕರ್ತರಿಗೆ ನ್ಯಾಯ ರಕ್ಷಣೆ ಸಿಗುತ್ತಿಲ್ಲ ಎಂದು ರಾಜೀನಾಮೆ ಕೊಟ್ಟ ಬಿಜೆಪಿ ಪದಾಧಿಕಾರಿಗಳಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಅಧಿಕಾರದ ದಾಹ ಇರುವ ಸರ್ಕಾರದಲ್ಲಿ ಕುಳಿತವರು ಮಾನ ಮರ್ಯಾದೆ ಇದ್ದಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಬಿಸಾಕಬೇಕಿತ್ತು. ಅಧಿಕಾರಕ್ಕೆ ಅಂಟಿಕೊಂಡಿದ್ದೀರಿ. ಭ್ರಷ್ಟಾಚಾರದಲ್ಲಿ ತೊಡಗಿದ್ದೀರಿ ಎಂದರು.
ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಆಡಳಿತ, ಸುರಕ್ಷತೆ ಇಲ್ಲ. ಇದು ನಾಲಾಯಕ್ ಸರ್ಕಾರ. ಹಿಂದುಗಳ ಓಟು ಬೇಕು ಅವರಿಗೆ ರಕ್ಷಣೆ ಕೊಡಲ್ಲ. ಕಾನೂನು ಸುವ್ಯವಸ್ಥೆ ಎಲ್ಲಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಭೆಯ ದುಷ್ಕರ್ಮಿಗಳ ಮೇಲೆ ಲಾಠಿ ಚಾಜ್೯ ಮಾಡಲ್ಲ. ಹಿಂದು ಕಾರ್ಯರ್ತನ ಅಂತ್ಯಕ್ರಿಯೆ ವೇಳೆ ಲಾಠಿ ಚಾಜ್೯ ಮಾಡ್ತೀರಾ. ಬಿಜೆಪಿ ರಾಜ್ಯಾಧ್ಯಕ್ಷ ದ.ಕ.ದಲ್ಲಿ ಒಬ್ಬ ಕಾರ್ಯಕರ್ತನನ್ನು ಮುಟ್ಟಲಿ ನೋಡೋಣ ಎಂದಿದ್ದರು. ನಿಮ್ಮ ಕ್ಷೇತ್ರದಲ್ಲೇ ಸಾವು ಆಗಿದೆ. ಸಂಸದ ಸ್ಥಾನಕ್ಕೆ, ಬಿಜೆಪಿ ಸ್ಥಾನಕ್ಕೆ ರಾಜ್ಯಾಧ್ಯಕ್ಷ ರಾಜೀನಾಮೆ ಕೊಡಿ ಎಂದರು.
ಇದೇ ಈದ್ಗಾ ಪ್ರಕರಣ, ಹಿಂದುತ್ವದಿಂದ ಗೆದ್ದು ಬಂದ ಬಿಜೆಪಿ ಪಿ. ರಮೇಶ ಕಾಸರಗೋಡು ಅವರಂಥ ಹಿರಿಯರನ್ನು ನಿನ್ನೆ ಎಳೆದಾಡಿದ್ದೀರಿ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದೀರಿ. 30 ಹಿಂದು ಕಾರ್ಯಕರ್ತರ ಕೊಲೆಗಳಲ್ಲಿ ಹರ್ಷ, ಚಂದ್ರು ಬಿಟ್ಟು ಎಲ್ಲ ಕೊಲೆಗಾರರು ಜಾಮೀನಿನ ಮೇಲೆ ಹೊರಗಿದ್ದಾರೆ. ಕಠಿಣ ಕ್ರಮ ಎಂದು ಹೇಳೋದಲ್ಲ. ಮಾಡಬೇಕು ಎಂದರು. ಸಿಎಂ, ಗೃಹ ಸಚಿವರು ಪ್ರವೀಣನ ಮನೆಗೆ ಹೋಗಿ. ಸಾಂತ್ವನ ಹೇಳಿ. ಮನೆ ಕಟ್ಟಲು ಸಹಾಯ ಮಾಡಬೇಕು. ಪ್ರವೀಣನ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಬೇಕು ಎಂಬ ಚರ್ಚೆ ಶುರುವಾಗಿದೆ. ಬಿಜೆಪಿ ಕೈಯಲ್ಲಿ ಆಗಲ್ಲ. ಹಿಂದು ರಾಜಕೀಯ ಶಕ್ತಿ ರಾಜ್ಯದಲ್ಲಿ ಪ್ರಾರಂಭವಾಗುತ್ತದೆ ಎಂದು ಪ್ರಮೋದ ಮುತಾಲಿಕ ಹೇಳಿದರು. ಎಲ್ಲರಿಗೂ ರಕ್ಷಣೆ ಕೊಡಲಾಗಲ್ಲ ಎಂದಿರುವ ತೇಜಸ್ವಿ ಸೂರ್ಯ ಹೇಳಿಕೆ ಖಂಡನೀಯ. ಒಂದು ಸಲ ಮತ ಹಾಕಿ ಗೆಲ್ಲಿಸಿದರೆ ಜನರ ರಕ್ಷಣೆ ಹೊಣೆ ನಿಮ್ಮದೇ. ಆತ ಆ ಹೇಳಿಕೆ ವಾಪಸ್ ತಗೋಬೇಕು. ಸಿದ್ದರಾಮಯ್ಯ ಸರ್ಕಾರ ಎಸ್ ಡಿ ಪಿ ಐ, ಪಿಎಫ್ಐ ಕೇಸ್ ವಾಪಸ್ ಪಡೆದಿದ್ದರು. ಸಿಮಿ ಬ್ಯಾನ್ ಆದ ಬಳಿಕ ಅವರ ಚಟುವಟಿಕೆ ನಿಂತಿದೆ. ಇವನ್ನೂ ಬ್ಯಾನ್‌ಮಾಡಿ. ಬೇರೆ ರೂಪದಲ್ಲಿ ಬರಲಿ ಮತ್ತೆ ನೋಡೋಣ. ರಾಜಕಾರಣಿಗಳ ಮಕ್ಕಳು ಸಾಯುತ್ತಿಲ್ಲ. ಝಡ್ ಪಿ, ಎಂಎಲ್‌ಎ ಮಾಡಲು ಯೋಜಿಸುತ್ತೀರಿ. ಬಜರಂಗದಳ ಸಂಚಾಲಕ ಮಾಡಿ ನೋಡೋಣ. ಯಾವುದೇ ಎಂಎಲ್‌ಎ ನಿಮ್ಮ ಮಕ್ಕಳನ್ನು ಕೊಡಿ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಮಾಡ್ತೀನಿ. ಗೌರಿ ಹಂತಕರಿಗೆ ಕೋಕಾ ಹಾಕ್ತೀರಿ. ಇವರಿಗೆ ಯಾಕೆ ಹಾಕಲ್ಲ. ಕೋಕಾ ಕಾಯ್ದೆ ಯಾಕೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು.
ಆಗಸ್ಟ್ 5ರಂದು ಪ್ರತಿಭಟನೆ
ಆಗಸ್ಟ್ 5ರಂದು ರಾಜ್ಯದ ಎಲ್ಲ ಹಿಂದು ಸಂಘಟನೆಗಳು ಒಟ್ಟಾಗಿ ಪಿಎಫ್ ಐ, ಎಸ್ ಡಿ ಪಿ ಐ ನಿಷೇಧಿಸಲು ಆಗ್ರಹಿಸಿ ಎಲ್ಲ ಮಠಾಧೀಶರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸಿಎಂ ಹೇಳುತ್ತಾರೆ ಛತ್ತೀಸಘಡದಲ್ಲಿ ಬ್ಯಾನ್ ಮಾಡಿದ್ದರು. ಒಂದು ತಿಂಗಳಲ್ಲಿ ಕೊಟ್೯ ವಾಪಸ್ ಮಾಡಿದೆ. ಅದಕ್ಕೆ ಬ್ಯಾನ್‌ಮಾಡಲಾಗಲ್ಲ ಅಂತಾರೆ. ಈ ರೀತಿ ಅವರನ್ನು ಸಾಕುವುದು ಬೇಡ. ಕಾನೂನು ಸಲಹೆ ಪಡೆದು, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದರು.