ಅಧ್ಯಕ್ಷರಾಗಿ ಪ್ರವೀಣ್, ಉಪಾಧ್ಯಕ್ಷರಾಗಿ ರಮೇಶ್

10 gkp 1
ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಪಕ್ಷದ ಪ್ರಮುಖರು.
Published on

ಗೋಣಿಕೊಪ್ಪ: ತೀವ್ರ ಕುತೂಹಲ ಕೆರಳಿಸಿದ್ದ ಪ್ರತಿಷ್ಠಿತ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದು 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಸಂಘದ ಆವರಣದಲ್ಲಿ ಭಾನುವಾರ ಜರುಗಿತು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ 1 ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾದ ಬಿ.ಜಿ.ಸಂದೀಪ್ ಅವರು ಅಜ್ಜಿಕುಟ್ಟಿರ ಪ್ರವೀಣ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮೇಲತಂಡ ರಮೇಶ್ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಉಪಾಧ್ಯಕ್ಷ ಸ್ಥಾನವನ್ನು ತಲಾ 20 ತಿಂಗಳಿಗೆ ನಿಗದಿಗೊಳಿಸಿದ್ದು ಮೊದಲ ಅವಧಿಯಲ್ಲಿ ಮೇಲತಂಡ ಎ.ರಮೇಶ್ ಅವರನ್ನು ನೇಮಕ ಮಾಡಲಾಗಿದೆ. ಎರಡನೇ ಅವಧಿಯಲ್ಲಿ ತೀತಿರ ಊರ್ಮಿಳಾ ಹಾಗೂ 3ನೇ ಅವಧಿಗೆ ಮತ್ರಂಡ ಬಿ.ಬೋಪಣ್ಣ ಅವರನ್ನು ನೇಮಕ ಮಾಡಲಾಗುವುದು ಎಂದು ಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬೊಜ್ಜಂಗಡ ಎನ್.ಸುನೀಲ್, ಕುಪ್ಪಣಮಾಡ ಕುಶ ಹಾಗೂ ಸಹ ಪ್ರಮುಖ್ ಕೊಟ್ಟಂಗಡ ರಾಜ ತಿಳಿಸಿದರು.
ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ವಿಚಾರದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಅಪಾದನೆ ಮಾಡಿದ್ದರು. ಇವರ ಆರೋಪವನ್ನು ಬಿಜೆಪಿ ಸದಸ್ಯರು ಅಲ್ಲಗೆಳೆದಿದ್ದರು. ಎರಡೂ ಪಕ್ಷದವರು ಆರೋಪ ಪ್ರತ್ಯಾರೋಪ ಮಾಡಿದ್ದರು. ನಂತರದ ಬೆಳವಣಿಗೆಯಲ್ಲಿ ಚುನಾವಣೆಯ ಮೇಲೆ ಇದರ ಪರಿಣಾಮ ಬೀರಿತ್ತು. ಸಹಕಾರ ಸಂಘಕ್ಕೆ ಇಲಾಖೆ ವತಿಯಿಂದ ವಿಶೇಷ ಅಧಿಕಾರಿಯನ್ನು ನೇಮಕಗೊಳಿಸಿತ್ತು. ಇದರಿಂದ ಸದಸ್ಯರಿಗೆ ಸಾಲ ಯೋಜನೆ ಲಾಭ ಪಡೆಯಲು ತೊಂದರೆ ಎದುರಾಗಿತ್ತು.

13 ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂತಿಮವಾಗಿ ಬಿಜೆಪಿ ಬೆಂಬಲಿತ 12 ಸದಸ್ಯರು ಗೆಲುವು ಸಾಧಿಸಿದ್ದರು. ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಗೆಲುವು ಸಾಧಿಸಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಅಜ್ಜಿಕುಟ್ಟಿರ ಪ್ರವೀಣ್ ಮುತ್ತಪ್ಪ ಮಾತನಾಡಿ, ಹುದಿಕೇರಿ ಸಹಕಾರ ಸಂಘವು ಸ್ವಂತ ಬಂಡವಾಳದಿಂದ ಅಭಿವೃದ್ಧಿಯನ್ನು ಕಂಡಿದೆ. ಈ ಹಿಂದಿನ ಮೂರು ಅವಧಿಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಹಿನ್ನೆಲೆಯಲ್ಲಿ ಈ ಬಾರಿಯೂ ಅಧ್ಯಕ್ಷಗಾದಿಗೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಬ್ಯಾಂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.

ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಕೋಳೆರ ಎಸ್.ನರೇಂದ್ರ, ಕಾಳಿಮಾಡ ಎ.ನರೇಂದ್ರ, ಮತ್ರಂಡ ಬಿ.ಬೋಪಣ್ಣ, ಅಜ್ಜಿಕುಟ್ಟಿರ ಎ.ಬೋಪಣ್ಣ, ಕಿರಿಯಮಾಡ ಕೆ.ಮಂದಣ್ಣ, ಚೇಂದಿರ ಡಿ.ತಿಮ್ಮಯ್ಯ, ತೀತಿರ ಎಸ್.ಊರ್ಮಿಳಾ, ಕಳೇಂಗಡ ಪಿ.ಗಾಯತ್ರಿ. ಎಚ್.ಕೆ.ರಾಜಪ್ಪ, ಜೆ.ಬಿ.ಗಂಗು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸಿ.ಸೀತಮ್ಮ ವಿಶೇಷಾಧಿಕಾರಿ ಕರುಣ್ ಕಾರ್ಯಪ್ಪ, ಉಪಸ್ಥಿತರಿದ್ದರು. ಚುನಾವಣಾಧಿಕಾರಿಗಲಾಗಿ ಬಿ.ಜಿ.ಸಂದೀಪ್, ಚುನಾವಣಾ ಪ್ರಕ್ರಿಯೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net