

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ರಾಜ್ಯದ ಪ್ರವಾಸಿ ತಾಣ, ಬೀಚ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೀವ ರಕ್ಷಣೆ ಮಾಡುವ ಪ್ರವಾಸಿ ಮಿತ್ರರು ಈಗ ಅತಂತ್ರರಾಗಿದ್ದಾರೆ. ಸರಿಯಾಗಿ ಪಾವತಿಯಾಗದ ವೇತನ, ಕೆಲಸದ ಭದ್ರತೆ ಇಲ್ಲದೆ, ಪ್ರವಾಸಿ ಮಿತ್ರ ಸಿಬ್ಬಂದಿಯ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷೃದ ಪರಿಣಾಮ, ಈ ಕೆಲಸಕ್ಕೆ ಸೇರುವಾಗ ಇದ್ದ ಉಮೇದು, ಆತ್ಮವಿಶ್ವಾಸ ಹಲವು ಸಿಬ್ಬಂದಿಯಲ್ಲಿ ಈಗ ಉಳಿದಿಲ್ಲ. ದಿನಕ್ಕೆ 380 ರೂ.ಸಂಬಳದ ಜತೆ ಕೆಲಸದ ಭದ್ರತೆಯೂ ಇಲ್ಲದೆ ಹಲವರು ಪ್ರವಾಸಿ ಮಿತ್ರರು ನೌಕರಿ ತೊರೆದಿದ್ದಾರೆ. ಇನ್ನಷ್ಟು ಮಂದಿ ಕೆಲಸ ಬಿಡುವ ಸಿದ್ಧತೆಯಲ್ಲಿದ್ದಾರೆ. ಪ್ರವಾಸಿ ಮಿತ್ರ ನೇಮಕ ವೇಳೆ ಗೃಹರಕ್ಷಕ ದಳದ ಗಾರ್ಡ್‌ಗಳಿಗೂ ಆದ್ಯತೆ ನೀಡಲಾಗಿದೆ. ಪ್ರವಾಸಿ ಮಿತ್ರ ನೇಮಕ ಸರ್ಕಾರದ ಸೃಜನಾತ್ಮಕ ನಿರ್ಧಾರ ಆಗಿದ್ದರೂ ವೇತನ ಸಮಸ್ಯೆ, ಭದ್ರತೆ ಕೊರತೆ ಕಾರಣಕ್ಕೆ ಪ್ರವಾಸಿ ಇಲಾಖೆ ವಿನೂತನ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದೆ.
ಪ್ರವಾಸಿ ಮಿತ್ರನೆಂದರೆ..
ಪ್ರವಾಸಿ ತಾಣ, ಬೀಚ್‌ಗಳಲ್ಲಿ ಜೀವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಮಿತ್ರರ ನೇಮಕಕ್ಕೆ 2015-16ರಲ್ಲಿ ಚಾಲನೆ ನೀಡಿತ್ತು. ನೇಮಕಕ್ಕೆ ಮುನ್ನ ಮೈಸೂರಲ್ಲಿ ಮೊದಲ ಹಾಗೂ ಎರಡನೇ ಹಂತದ ತರಬೇತಿ ನೀಡಿ ರಾಜ್ಯದ 29 ಜಿಲ್ಲೆಗಳ ಪ್ರಮುಖ ಪ್ರವಾಸಿತಾಣಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 900 ಪ್ರವಾಸಿ ಮಿತ್ರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಿಯಾಗಿ ಸಂಬಳ ಮತ್ತು ಕೆಲಸದ ಭದ್ರತೆ ನೀಡಬೇಕು ಎನ್ನುವುದು ಪ್ರವಾಸಿ ಮಿತ್ರರ ಬೇಡಿಕೆ.
ಪ್ರವಾಸಿಗರ ಮೇಲೆ ಹದ್ದಿನ ಕಣ್ಣು
ಪ್ರವಾಸಿ ಮಿತ್ರರು ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟು ಅಪಾಯ ಸ್ಥಳಕ್ಕೆ ಹೋಗದಂತೆ ಎಚ್ಚರಿಸುತ್ತಾರೆ. ಕಡಲ ತಡಿಯಲ್ಲಿ, ಅಪಾಯ ಪ್ರದೇಶದಲ್ಲಿ ನೀರಿಗಿಳಿಯದಂತೆ ಎಚ್ಚರಿಸುವ ಜತೆ ಅಪಾಯ ಸಂಭವಿಸಿದರೆ, ರಕ್ಷಣೆಗೂ ಮುಂದಾಗುತ್ತಾರೆ. ಸುರಕ್ಷತೆ, ಸ್ಥಳದ ಮಾಹಿತಿ ನೀಡುವ ಜತೆ ಪರಿಸರ ಮಾಲಿನ್ಯ ತಡೆ ಕೂಡ ಪ್ರವಾಸಿ ಮಿತ್ರರ ಕರ್ತವ್ಯ. ಪ್ರವಾಸಿಗರಿಗೆ ಅಪಾಯವಾಗದಂತೆ ಕಾಯುವ ಇವರನ್ನು ರಾಜ್ಯದಲ್ಲಿ ಪ್ರವಾಸಿ ಮಿತ್ರರೆಂದೂ, ಕನ್ನಡೇತರರು ಟೂರಿಸ್ಟ್ ಪೊಲೀಸ್ ಎಂದೂ ಕರೆಯುತ್ತಾರೆ. ಪ್ರವಾಸಿ ಮಿತ್ರರನ್ನು ನೇಮಿಸಿದ ನಂತರ ಪ್ರವಾಸಿತಾಣಗಳಲ್ಲಿ ದುರಂತ ಸಂಭವಿಸಿಲ್ಲ ಎಂದು ಹೇಳುವಂತಿಲ್ಲ. ಈ ಮಿತ್ರರ ಮಾತು ಧಿಕ್ಕರಿಸಿ, ಮುನ್ನುಗ್ಗುವುದು, ಕಣ್ಣುತಪ್ಪಿಸಿ ಅಪಾಯ ಮೈಮೇಲೆ ಎಳೆದುಕೊಳ್ಳುವುದರಿಂದ ಅಪಾಯ ಸಂಭವಿಸುತ್ತಿದೆ. ಆದರೆ ಪ್ರವಾಸಿಗರ ಭೇಟಿಗೆ ಅನುಗುಣವಾಗಿ ಪ್ರವಾಸಿಮಿತ್ರ ನೇಮಕಾತಿ ನಡೆಯಬೇಕು. ಹೀಗಾದರೆ ಮತ್ತಷ್ಟು ಅಪಾಯ ತಡೆ ಸಾಧ್ಯ ಎನ್ನುವುದು ಪ್ರವಾಸಿಗರ ಅಭಿಪ್ರಾಯ.
ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸದ ಸೃಷ್ಟಿಯ ಅವಕಾಶ ಹೆಚ್ಚಿದ್ದು, ಪ್ರವಾಸಿ ಮಿತ್ರರಲ್ಲದೆ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡುವವರೂ ಇದ್ದಾರೆ. ನಮ್ಮ ಇಲಾಖೆಯಿಂದ ಇನ್ನಷ್ಟು ಸಿಬ್ಬಂದಿ ನೇಮಕ ಮಾಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗುತ್ತದೆ. ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದು, ಪ್ರವಾಸಿಮಿತ್ರರಿಗೆ ಸಂಬಂಧಿಸಿದ ಫೈಲ್ ತರಿಸಿ, ಸರಿಯಾಗಿ ತಿಂಗಳಿಗೆ ವೇತನ ಪಾವತಿಸುವ ಹಾಗೂ ಕೆಲಸದ ಭದ್ರತೆ ಕ್ರಮದ ಬಗ್ಗೆ ಗಮನ ಹರಿಸಲಾಗುತ್ತದೆ.
ಯೋಗೇಶ್ವರ್, ಸಚಿವ, ಪ್ರವಾಸೋದ್ಯಮ ಇಲಾಖೆ
ಉಡುಪಿ ಜಿಲ್ಲೆಯಲ್ಲಿ 10 ಪ್ರವಾಸಿ ಮಿತ್ರರನ್ನು ನೇಮಕ ಮಾಡಲಾಗಿದೆ. ಬೀಚ್ ಹಾಗೂ ಪ್ರವಾಸಿ ತಾಣಗಳಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಎರಡು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಪ್ರವಾಸಿಮಿತ್ರರ ಸಂಬಳ ಹಾಗೂ ಕೆಲಸದ ಭದ್ರತೆಯ ವಿಮರ್ಶೆ ಆಗಬೇಕಾದುದು ಸರ್ಕಾರದ ಮಟ್ಟದಲ್ಲಿ. ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು.
-ಸೋಮಶೇಖರ್, ಎಡಿ, ಉಡುಪಿ
ದ.ಕ.ಜಿಲ್ಲೆಯಲ್ಲಿ 6 ಮಂದಿ
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಇದ್ದ 20 ಪ್ರವಾಸಿ ಮಿತ್ರರಲ್ಲಿ ಸದ್ಯ 6 ಮಂದಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದಾರೆ. ಸರಿಯಾಗಿ ಪಾವತಿಯಾಗದ ಸಂಬಳ, ತಾತ್ಕಾಲಿಕ ವೃತ್ತಿ ಎಂಬಿತ್ಯಾದಿ ಕಾರಣಗಳಿಂದ 14 ಮಂದಿ ನೌಕರಿ ತೊರೆದಿದ್ದಾರೆ. ಹಾಗಾಗಿ ಮತ್ತೆ 14 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅವರಿಗೆ ಗೃಹರಕ್ಷಣಾ ಪಡೆಯ ಅಧಿಕಾರಿಗಳಿಂದ ತರಬೇತಿ ಕೊಡಿಸಬೇಕಿದೆ. ಆ ಬಳಿಕ ಅವರನ್ನು ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರ ಅಧಿಕಾರಿ ಮಾಣಿಕ್ಯ ವಿಜಯವಾಣಿಗೆ ತಿಳಿಸಿದ್ದಾರೆ.