

ಧಾರವಾಡ: ಬಸವಣ್ಣನವರು ಸಮÁನತೆಯ ಬೀಜ ಬಿತ್ತಿದವರು. ವಚನ ಸಾಹಿತ್ಯದ ಸಾರವನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.
ನಗರದ ಮುರುಘಾಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ `ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ಮತ್ತು ಸಾಹಿತ್ಯ' ಪ್ರವಚನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
೧೨ನೇ ಶತಮಾನದ ಶರಣರ ವಚನ ಸಾಹಿತ್ಯ ದೇಶಕ್ಕೆ ಮÁದರಿಯÁಗಿದೆ. ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಆಚಾರ- ವಿಚಾರ, ಆಧ್ಯಾತ್ಮಿಕ ವಿಚಾರಗಳು ಮೂಡಬೇಕು. ಜಾತಿ- ಜಾತಿಗಳ ನಡುವಿನ ಸಂಘರ್ಷ ತೊರೆದು ಪ್ರೀತಿ, ಸಾಮರಸ್ಯದಿಂದ ಬದುಕುವಂತಾಗಬೇಕು ಎಂದರು.
ನೇತೃತ್ವ ವಹಿಸಿದ್ದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾತನಾಡಿ, ೧೨ ತಿಂಗಳಲ್ಲಿ ಶ್ರಾವಣ ಮಾಸದಲ್ಲಾದರೂ ಮನಸ್ಸಿಗೆ ಆಧ್ಯಾತ್ಮಿಕ ವಿಚಾರಗಳನ್ನು ತುಂಬಬೇಕು. ಪ್ರಸಕ್ತ ಶ್ರಾವಣ ಮಾಸದಾದ್ಯಂತ ಮಠದಲ್ಲಿ ಮುಳುಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಜೀವನ ಪ್ರವಚನ ನಡೆಯುತ್ತಿದೆ. ಪ್ರತಿದಿನ ಪ್ರವಚನ ಕೇಳಿ ಅರಿವು- ಆಚಾರವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಕುಂದಗೋಳದ ಶ್ರೀ ಬಸವಣ್ಣಜ್ಜ ಸ್ವಾಮೀಜಿ, ಲಿಂಗನಾಯನಹಳ್ಳಿ ಶ್ರೀ ನಿರಂಜನ ದೇವರು ಸಾನ್ನಿಧ್ಯ ವಹಿಸಿದ್ದರು. ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಮುಮ್ಮಿಗಟ್ಟಿ ಶಿವಯೋಗಾಶ್ರಮದ ಡಾ. ಬಸವಾನಂದ ಸ್ವಾಮೀಜಿ ಪ್ರವಚನ ನೀಡಿದರು. ಸಾಹಿತಿ ಡಾ. ವೀರಣ್ಣ ರಾಜೂರ, ಮಠದ ಆಡಳಿತ ಮಂಡಳಿಯ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಶಿವಶಂಕರ ಹಂಪಣ್ಣನವರ, ಇತರರಿದ್ದರು.