

ಮಡಿಕೇರಿ: ಜಿಲ್ಲೆಯ ಪ್ರಥಮ ಆಕರ್ಷಕ ಶ್ರೀ ಕೋದಂಡ ರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮೇ.೨ ರಿಂದ ೪ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ತಿಳಿಸಿದರು.
ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ದೇವಾಲಯ ಶಿಲೆಯಿಂದ ನಿರ್ಮಾಣಗೊಂಡು, ಪುನರುತ್ಥಾನ ನಂತರ ಪುನರ್‌ಪ್ರತಿಷ್ಠಾಪನಾ ಮಹೋತ್ಸವ ನಡೆಯುತ್ತಿದೆ. ಕೊಡಗಿನಲ್ಲಿ ಹಲವು ರಾಮಮಂದಿರಗಳಿದ್ದರೂ ವಿದ್ಯುಕ್ತವಾಗಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಸೀತಾ, ಲಕ್ಷ್ಮಣ, ಹನುಮಂತ ಸಹಿತ ಶ್ರೀ ಕೋದಂಡರಾಮ ದೇವಾಲಯ ಎಲ್ಲಿಯೂ ಇಲ್ಲ. ಇದರೊಂದಿಗೆ ಶಬರಿಮಲೈನಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ನೆಲೆ ನಿಂತಿರುವ ಮಹಾಗಣಪತಿಯಂತೆ ಮಡಿಕೇರಿಯಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ಶ್ರೀ ಬಲಮುರಿ ಕ್ಷಿಪ್ರಪ್ರಸಾದ ಮಹಾಗಣಪತಿಯ ದೇಗುಲವೂ ನಿರ್ಮಾಣಗೊಂಡಿದ್ದು ಪ್ರತಿಷ್ಠಾಪನೆಗೊಳ್ಳಲಿದೆ. ನವಗ್ರಹಗಳ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗುತ್ತದೆ. ಮೇ.೨, ೩ ಮತ್ತು ೪ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮೇ.೨ ರ ಸಂಜೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ಹೋಮ-ಹವನಾದಿಗಳು ಮೇ.೩ ರಂದು ಮುಂದುವರಿಯಲಿದೆ. ಮೇ.೩ ರಂದು ಬೆ. ೯ ಗಂಟೆಗೆ ಪ್ರಧಾನ ಕಲಶ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊಂದಿಗೆ ಧಾರ್ಮಿಕ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದೆ. ವಿವಿಧ ಕಲಾ ತಂಡಗಳು, ಚಂಡೆ ವಾದ್ಯ, ಭಜನಾ ತಂಡಗಳ, ಕಲಶ ಹೊತ್ತ ಮಹಿಳೆಯರ ಸಹಿತ ಮೆರವಣಿಗೆಯು ತೆರಳಿ ಬಳಿಕ ದೇವಾಲಯ ಆವರಣ ತಲುಪುತ್ತದೆ. ಮಧ್ಯಾಹ್ನ ೧ ಗಂಟೆ ಬಳಿಕ ಅನ್ನ ಸಂತರ್ಪಣೆಯಿರುತ್ತದೆ. ಸಂಜೆ ೫ ಗಂಟೆಯಿಂದ ದೇವಾಲಯ ಆವರಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗಿದೆ ಎಂದು ವಿವರಿಸಿದರು.
ಮೇ.೪ ರಂದು ದೇವಾಲಯ ಆವರಣದಲ್ಲಿ ವಿವಿಧ ಹೋಮ ಹವನಾದಿ ವಿದಿ ವಿಧಾನಗಳು ಬೆ.೬ ಗಂಟೆಗೆ ಪ್ರಾರಂಭಗೊಳ್ಳುತ್ತವೆ. ಬೆ.೭.೪೫ರ ವೃಷದ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ಜರುಗಲಿದೆ. ಬೆ.೧೦.೦೫ಕ್ಕೆ ಮಿಥುನ ಲಗ್ನದಲ್ಲಿ ಬ್ರಹ್ಮ ಕುಂಭಾಭಿಷೇಕ ಜರುಗಲಿದೆ. ಮಹಾಪೂಜೆ ಬಳಿಕ ಮಧ್ಯಾಹ್ನ ೧ ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೫ ರಿಂದ ದೇವಾಲಯ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದೇವಾಲಯ ಆವರಣದಲ್ಲಿ ವೇದೋಕ್ತ ಮಂತ್ರಪಠನ, ರಾಮಾಯಣ ಪಾರಾಯಣ ಹಾಗೂ ೫ ಭಜನಾ ಮಂಡಳಿಗಳಿಂದ ಮೇ.೪ ಮತ್ತು ೫ ರಂದು ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕೊದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿ, ಕಳೆದ ೪೦ ವರ್ಷಗಳ ಹಿಂದೆ ದೇವಾಲಯವೊಂದನ್ನು ನಿರ್ಮಿಸಿ ಕೆಳಭಾಗದಲ್ಲಿ ಕೋದಂಡರಾಮನನ್ನು ಪ್ರತಿಷ್ಠಾಪನೆಗೊಳಿಸಲಾಗಿತ್ತು. ಇದೀಗ ಜೀರ್ಣೋದ್ಧಾರದ ಮೂಲಕ ಮೇಲ್ಭಾಗಕ್ಕೆ ತರಲಾಗಿದೆ. ದೇವಾಲಯದಲ್ಲಿ ದಶಾವತಾರ, ಬ್ರಹ್ಮ-ಸರಸ್ವತಿ, ಶಿವ ಪರಿವಾರ, ಧನ್ವಂತರಿ, ದತ್ತಾತ್ರೇಯ, ಜಯವಿಜಯ, ಅಶ್ವಿನೀ ದೇವತೆಗಳು, ಶ್ರೀರಾಮ ಪಟ್ಟಾಭಿಷೇಕ ಹಾಗೂ ವಾಲ್ಮೀಕಿಯಿಂದ ಲವ-ಕುಶರಿಗೆ ರಾಮಾಯಣ ಪಠಣ ಇತ್ಯಾದಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈಗ ಕೆಳಭಾಗದಲ್ಲಿ ಸಮುದಾಯ ಭವನವಿದ್ದು ಅಲ್ಲಿ ಸ್ಥಳೀಯ ಸಮುದಾಯದವರ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುತ್ತದೆ. ಸಮುದಾಯ ಭವನದ ಕೆಲಸ ಇನ್ನೂ ಪೂರ್ಣಗೊಳ್ಳಬೇಕಾಗಿದೆ ಎಂದರು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ಈ ದೇವಾಲಯ ಸಾರ್ವಜನಿಕ ದೇವಸ್ಥಾನವಾಗಿದ್ದು, ಭಕ್ತಾದಿಗಳ ಸಹಕಾರದಿಂದ ಟ್ರಸ್ಟ್ ಮೂಲಕ ನಿರ್ವಹಿಸಲ್ಪಡುತ್ತಿದೆ. ಕಳೆದ ೫೦ ವರ್ಷಗಳಿಂದ ದೇವಾಲಯದ ಸಾನ್ನಿಧ್ಯ ಅಸ್ತಿತ್ವದಲ್ಲಿದೆ. ಆಗ ಭಜನಾ ಮಂದಿರವಿತ್ತು. ಶ್ರೀ ರಾಮನ ಚಿತ್ರ ಪಟಕ್ಕೆ ಪೂಜೆ ಮಾಡಲಾಗುತ್ತಿತ್ತು. ಕಾಲಕ್ರಮೇಣ ದೇವತಾ ಮೂರ್ತಿಗಳ ಪ್ರತಿಷ್ಟಾಪನೆ ನೆರವೇರಿಸಲಾಗಿದ್ದು, ಮಡಿಕೇರಿಯ ನಾಡಹಬ್ಬ ದಸರೆರಯಲ್ಲೂ ಈ ದೇವಾಲಯದಿಂದ ಮಂಟಪವೊಂದು ಸಿದ್ಧಗೊಂಡು ಶೋಭಾಯಾತ್ರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಾಲ್ಗೊಳ್ಳುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ನಂಜುಂಡ, ಸುಧಾಕರ್, ಗೋಪಿನಾಥ್ ಸುಬ್ಬರಾವ್, ಖಜಾಂಚಿ ಎಸ್.ಕುಶಾಲ್, ಎಚ್.ಎನ್.ತಿಮ್ಮಯ್ಯ, ಉಪಾಧ್ಯಕ್ಷ ಕೆ.ಮಧುಕರ್ ಇದ್ದರು.