

ಮಡಿಕೇರಿ:
ಮಡಿಕೇರಿ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಪ್ರತಿಷ್ಠಾಪನಾ ದಿನವನ್ನು ಇತ್ತೀಚೆಗೆ ವಿಜೃಂಭಣೆಯಿAದ ಆಚರಿಸಲಾಯಿತು. ಬೆಳಗ್ಗೆ ದೇವಿಯ ಅಭಿಷೇಕದೊಂದಿಗೆ ಪೂಜಾ ಕೈಂಕರ್ಯ ಪ್ರಾರಂಭವಾಗಿ, ದೇವಿಯ ಉತ್ಸವಮೂರ್ತಿಯ ಮೆರವಣಿಗೆ ಶ್ರೀ ಬಸವೇಶ್ವರ ಮತ್ತು ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ಮಾರ್ಗದುದ್ದಕ್ಕೂ ಆರತಿ ಸ್ವೀಕರಿಸಿ, ದೇವಾಲಯ ತಲುಪಿ, ಕಟ್ಟೆಪೂಜೆಯನ್ನು ಸ್ವೀಕರಿಸಿ ಸುಮಂಗಲಿಯರು ಹೊತ್ತ ತಂಬಿಟ್ಟು ಆರತಿಯೊಂದಿಗೆ ದೇವಾಲಯಕ್ಕೆ ಬಂದು ತೂಗು ಉಯ್ಯಾಲೆ ಪೂಜೆಯೊಂದಿಗೆ ಮಹಾಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ನೇಕಾರ ಆದ್ಯವಚನಕಾರರಾದ ಶ್ರೀ ದೇವರದಾಸಿಮಯ್ಯನವರ ಜಯಂತ್ಯುತ್ಸವವನ್ನು ಸಭಾಂಗಣದಲ್ಲಿ ಶಾಸ್ರ‍್ತೋಕ್ತ ಪೂಜೆಯೊಂದಿಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲೂಕು ನೇಕಾರ ಸಂಘದ ಅಧ್ಯಕ್ಷ ಡಿ. ಡಿ. ರಮೇಶ್ ದಾಸಿಮಯ್ಯನವರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಡಿ. ವಿ. ಜಗದೀಶ್, ಮಡಿಕೇರಿ ದೇವಾಂಗ ಸಂಘದ ಅಧ್ಯಕ್ಷ ಕೆ. ಎನ್. ಗಜಾನನ ಹಾಗೂ ಪದಾಧಿಕಾರಿಗಳು, ದೇವಾಂಗ ಮಹಿಳಾ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು. ಸಂಜೆ ಮಹಿಳಾ ಸಮಾಜದ ಸದಸ್ಯರಿಂದ ಲಲಿತಾ ಸಹಸ್ರನಾಮ ಪಾರಾಯಣ ಮಾಡಲಾಯಿತು.