

ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ರಿಯಲ್ ಎಸ್ಟೇಟ್ ಮಾಫಿಯಾ ಸೇರಿದಂತೆ ರಾಜಕಾಲುವೆ ಒತ್ತುವರಿ ವಿಚಾರಗಳು ಮುನ್ನಲೆಗೆ ಬರುತ್ತಿವೆ. ಏತನ್ಮಧ್ಯೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಹೆಸರು ಕೂಡ ಕೇಳಿ ಬಂದಿದೆ. ಮುನಿರತ್ನ ಅವರ ವಿಚಾರಣೆ ಮಾಡಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಸಹ ಆಗ್ರಹಿಸಿದ್ದರು.
ಮುನಿರತ್ನ ಅವರ ಹುಣಸಮಾರನಹಳ್ಳಿ ಜಮೀನಿನಲ್ಲಿ ಜಿಲೆಟಿನ್ ಸ್ಫೋಟ ಸಂಬಂಧ ಪ್ರತಿಮಾ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಶಾಸಕ ಮುನಿರತ್ನ ಸ್ವತಃ ಶಾಸಕ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆವರೆಗೆ ಮುನಿರತ್ನ ಹೊರಗೆ ಇರಬಾರದು ಅಂತ ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ತಿಹಾರ್ ಜೈಲಿಗೆ ಕಳಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ, ಅದು ಆಗ್ತಿಲ್ಲ, ನನ್ನ ಮನೆ ಮುಂದೆ ನಡೆಯುವ ಅಪಘಾತವನ್ನೂ ನನ್ನ ತಲೆಗೆ ಕಟ್ಟುವ ಸನ್ನಿವೇಶ ಇದೆ ಎಂದು ಆರೋಪಿಸಿದರು.
ಈಗ ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ನಾನು ಮಾತನಾಡುವುದು ಸರಿಯಲ್ಲ, ಸೂಕ್ತವೂ ಅಲ್ಲ. ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಬೇಕು ಅನ್ನೋರಿಗೆ ತನಿಖೆ ಬಳಿಕ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಸೂರ್ಯ ಮುಕುಂದರಾಜ್ ಹೇಳಿದ್ದಿಷ್ಟು...
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸೂರ್ಯ ಮುಕುಂದರಾಜ್, ದಾಖಲೆಗಳನ್ನು ಕೂಡ ಹಂಚಿಕೊಂಡಿದ್ದಾರೆ. "ಕೊಲೆಯಾಗಿರುವ ಹಿರಿಯ ಭೂವಿಜ್ಞಾನಿ ಪ್ರತಿಮಾ ಅವರು ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಶಾಸಕ ಸಿಡಿ ಕಂಪನಿಗಳ ಮಾಲೀಕ ಮುನಿರತ್ನ ವಿರುದ್ಧ ಅಕ್ರಮ ಸ್ಪೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿ ಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿರಬಹುದು ಪೊಲೀಸರು ತನಿಖೆ ನಡೆಸಬಹುದು" ಎಂದು ಭಾವಿಸುತ್ತೇನೆ ಎಂದು ದಾಖಲೆಗಳ ಸಮೇತ ಮಾಹಿತಿ ನೀಡಿದ್ದಾರೆ.