ಮಕ್ಕಳಿಗೆ ಪಾಲಕರ ಕಷ್ಟದ ಅರಿವಿರಲಿ: ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ ಕಿವಿಮಾತು

Pratibha Puraskara Mandya
Published on

ಮಂಡ್ಯ: ಪ್ರಸ್ತುತ ದಿನದಲ್ಲಿ ಮಕ್ಕಳು ಪಾಲಕರ ಕಷ್ಟಗಳನ್ನು ಅರಿಯದೆ ಹಾಗೂ ತಮ್ಮ ಜೀವನದ ಅಮೂಲ್ಯ ಸಮಯವನ್ನು ಓದಿನಲ್ಲಿ ತೊಡಗಿಸಿಕೊಳ್ಳದೆ ಮೊಬೈಲ್ ಬಳಕೆಯಲ್ಲಿಯೇ ಮುಳುಗಿರುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ವಾಹನ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಮಕ್ಕಳು ಕೂಡ ತಮ್ಮ ಪಾಲಕರ ಕಠಿಣ ಪರಿಶ್ರಮವನ್ನು ಅರಿತುಕೊಳ್ಳಬೇಕು. ಈ ಮೂಲಕ ಚೆನ್ನಾಗಿ ಓದಿ ತಮ್ಮ ಜೀವನದಲ್ಲಿ ಅದ್ವಿತೀಯ ಸಾಧನೆ ಮಾಡಬೇಕು ಎಂದರು.

ವಾಹನ ಚಾಲಕ ವೃತ್ತಿಯೂ ಬಹಳ ಜವಾಬ್ದಾರಿಯುತವಾಗಿದ್ದು, ತಮ್ಮ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವಾಹನ ಚಾಲಕರಿಗೂ ತುಂಬು ಹೃದಯದ ಧನ್ಯವಾದಗಳು. ಚಾಲನೆಯಲ್ಲಿ ಕೆಲವು ಸಣ್ಣ ಪುಟ್ಟ ವ್ಯತ್ಯಾಸವಾದರೂ ಕೂಡ ಅದು ಅಪಘಾತಕ್ಕೆ ಎಡೆಮಾಡಿಕೊಡುತ್ತದೆ ಎಂದು ತಿಳಿದಿದ್ದರೂ ಸಹ ತಮ್ಮ ಜೀವದ ಹಂಗನ್ನು ತೊರೆದು ಧೈರ್ಯದಿಂದ ಹಗಲು- ಇರುಳು ಎಂದು ಲೆಕ್ಕಿಸದೆ ನಿಷ್ಠೆಯಿಂದ, ಅತ್ಯಂತ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ ಎಂದರು.

ಸಂಘದ ರಾಜ್ಯಾಧ್ಯಕ್ಷ ಎನ್.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಚೆಲುವರಾಜು, ಗೌರವಾಧ್ಯಕ್ಷ ಜಿ.ಹಾಲೇಶ್, ಟಿ.ರಾಜು, ನಾಗರಾಜು, ತಿಮ್ಮರಾಜು, ಕೆ.ಎಸ್.ವಿಜಯಕುಮಾರ್ ಇತರರಿದ್ದರು.

ಇದೇ ವೇಳೆ ನಿವೃತ್ತಿ ವಾಹನ ಚಾಲಕರಿಗೆ ಸನ್ಮಾನ ಮಾಡಲಾಯಿತು. ಕಳೆದ ಸಾಲಿನ ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಾಹನ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net