ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿಸಲಿರುವ ಪ್ರತಿಭಾ ಪುರಸ್ಕಾರ

ತಿ.ನರಸೀಪುರದ ಗಾಣಿಗರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಮಚಂದ್ರ, ವೆಂಕಟರಮಣಶೆಟ್ಟಿ, ಮಹದೇವಶೆಟ್ಟಿ, ಆರ್.ರಾಮು, ಶಿವರಾಜು ಇದ್ದರು.
ತಿ.ನರಸೀಪುರದ ಗಾಣಿಗರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಮಚಂದ್ರ, ವೆಂಕಟರಮಣಶೆಟ್ಟಿ, ಮಹದೇವಶೆಟ್ಟಿ, ಆರ್.ರಾಮು, ಶಿವರಾಜು ಇದ್ದರು.
Published on

ತಿ.ನರಸೀಪುರ: ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜತೆಗೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಗಾಣಿಗರ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ ಹೇಳಿದರು.

2023-24ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಟ್ಟಣದ ದಳವಾಯಿ ಅಗ್ರಹಾರ ಬೀದಿಯಲ್ಲಿರುವ ತಾಲೂಕು ಗಾಣಿಗರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನಿರಂತರವಾಗಿ ಸಂಘದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅನಿವಾರ್ಯ ಕಾರಣಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಸ್ಥಗಿತಗೊಂಡಿದೆ. ಆದರೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರಂತರವಾಗಿ ಸಾಗಿದೆ ಎಂದರು.

ಪ್ರತಿ ವಿದ್ಯಾರ್ಥಿಯಲ್ಲೂ ಒಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪಾಲಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ಹೇಳಿದರು.

ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಆದರೆ ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ ಅಗತ್ಯವಿದೆ. ವಿದ್ಯಾರ್ಥಿಗಳು ಯಾವ ಗುರಿ ತಲುಪಬೇಕು ಎನ್ನುವುದನ್ನು ಚಿಕ್ಕಂದಿನಲ್ಲೇ ನಿರ್ಧಾರ ಮಾಡಬೇಕು ಎಂದರು.

ಮುಂದಿನ 20 ವರ್ಷಗಳಿಗೆ ಬೇಕಾದ ಉದ್ಯೋಗ ಭಾರತದಲ್ಲೇ ಇದ್ದು ಅದಕ್ಕೆ ಬೇಕಾದ ರೀತಿಯ ಶಿಕ್ಷಣವನ್ನು ಪಡೆಯುವತ್ತ ನಮ್ಮ ಮಕ್ಕಳು ಪ್ರಯತ್ನಿಸಬೇಕು. ಮಕ್ಕಳು ತಮ್ಮನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಾಗ ಉತ್ತಮ ಫಲಿತಾಂಶದೊಂದಿಗೆ ಒಳ್ಳೆಯ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಾಣಿಗ ಸಮಾಜದ ಮುಖಂಡ ವೆಂಕಟರಮಣಶೆಟ್ಟಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಬೇಡದ ವಿಷಯಗಳತ್ತ ಚಿತ್ತ ಹರಿಸದೆ ಏಕಾಗ್ರತೆಯಿಂದ ಶಿಕ್ಷಣ ಪಡೆಯಲು ಮುಂದಾಗಬೇಕು. ಮೊಬೈಲ್ ನಮಗೆ ಅನಿವಾರ್ಯವೇ ಹೊರತು ಅದೇ ಜೀವನ ಅಲ್ಲ. ಹಾಗಾಗಿ ಪಾಲಕರು ಮಕ್ಕಳಿಗೆ ಹೆಚ್ಚಾಗಿ ಮೊಬೈಲ್ ನೀಡದೆ ಅವರ ವಿದ್ಯಾಭ್ಯಾಸಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವಂತಾಗಬೇಕು ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಸಮುದಾಯದ 26 ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಸೋಸಲೆ ಮಹದೇವಶೆಟ್ಟಿ, ಕಾರ್ಯದರ್ಶಿ ಆರ್.ರಾಮು, ಖಜಾಂಚಿ ಎಂ.ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಶಾಮಿಯಾನ ಶಿವರಾಜು, ಸುರೇಶ್, ಶಿಕ್ಷಕ ಮಹದೇವಪ್ಪ, ಸಂಘದ ಮಾಜಿ ಸಹ ಕಾರ್ಯದರ್ಶಿ ಸಿ.ಜಯಣ್ಣ, ಸಮಾಜ ಸೇವಕ ಗಿರಿ ಮಲ್ಲೇಶ್, ಆರ್.ತಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net