ವಿಪಕ್ಷದ ಪ್ರಚೋದನೆಗೆ ಪ್ರಾಮುಖ್ಯತೆ ಬೇಡ: ಸಚಿವ ಎನ್.ಚಲುವರಾಯಸ್ವಾಮಿ ಮನವಿ

Pratibha Puraskar programme mandya
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸು, 5 ಲಕ್ಷ ರೂ.ವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳು ವಿಪಕ್ಷದವರ ಕಣ್ಣು ಕುಕ್ಕುತ್ತಿವೆ. ಆರ್ಥಿಕ ಸುಭದ್ರತೆಯೊಂದಿಗೆ ಸರ್ಕಾರ ಮುನ್ನಡೆಯುತ್ತಿರುವುದನ್ನು ತಡೆದುಕೊಳ್ಳಲಾಗದೆ ಟೀಕೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಕನಕ ಭವನದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ವಿರೋಧ ಪಕ್ಷದವರು ಆಡುತ್ತಿರುವ ಪ್ರಚೋದನಾಕಾರಿ ಮಾತುಗಳಿಗೆ ಜನರು ಪ್ರಾಮುಖ್ಯತೆ ನೀಡಬಾರದು. ಹಲವು ದಶಕಗಳಿಂದ ಕುರುಬ ಸಮುದಾಯ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬುತ್ತಿದೆ. ಸಮುದಾಯದಲ್ಲಿರುವ ಒಗ್ಗಟ್ಟು ಇದಕ್ಕೆ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವರೂ ಕೂಡ ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಸಮುದಾಯವನ್ನು ಒಡೆಯಲಿಲ್ಲ, ವಿಂಗಡಣೆಯನ್ನೂ ಮಾಡಲಿಲ್ಲ. ನೊಂದ ಸಮುದಾಯದ ಜನರ ಪರ ಹೆಚ್ಚು ಕಾಳಜಿ ವಹಿಸಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಎಲ್ಲ ವರ್ಗದ ಜನರ ಸೇವೆಯನ್ನು ಗುರಿಯಾಗಿಸಿಕೊಂಡು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕುರುಬ ಸಮುದಾಯದ ಹಾಸ್ಟೆಲ್ ಕಟ್ಟಡ ತುಂಬ ಹಳೆಯದಾಗಿದೆ. ಅಲ್ಲಿ ಯಾವುದೇ ಸೌಕರ್ಯಗಳಿಲ್ಲ. ಹಾಲಿ ಇರುವ ಹಳೆಯ ಕಟ್ಟಡವನ್ನು ಕೆಡವಿ ಸುಸಜ್ಜಿತವಾದ ನೂತನ ಹಾಸ್ಟೆಲ್ ಕಟ್ಟಡವನ್ನು ನಿರ್ಮಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಆಸಕ್ತರಾಗಿದ್ದಾರೆ. ಏಳೂ ತಾಲೂಕುಗಳಲ್ಲಿ ಕನಕ ಸಮುದಾಯ ಭವನಗಳ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಕುರುಬ ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.

ಮುಂಬರುವ ಸ್ಥಳೀಯ ಸಂಸ್ಥೆ, ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತಹ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಅಭಿವೃದ್ಧಿ ಕೆಲಸಗಳಿಗೂ ಒತ್ತಾಸೆಯಾಗಿ ನಿಂತಿದೆ. ಬಿಜೆಪಿ-ಜೆಡಿಎಸ್‌ನವರ ಮಾತುಗಳಿಗೆ ಮಾನ್ಯತೆ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಇದರಿಂದ ಸಿದ್ದರಾಮಯ್ಯನವರ ನಾಯಕತ್ವಕ್ಕೂ ಶಕ್ತಿ ಬರುತ್ತದೆ ಎಂದು ಹೇಳಿದರು.

ಕಾಗಿನೆಲೆ ಕನಕಗುರುಪೀಠದ ಕೆ.ಆರ್.ನಗರ ಶಾಖೆ ಪೀಠಾಧ್ಯಕ್ಷ ಶಿವಾನಂದಪುರಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಪಿ.ರವಿಕುಮಾರ್, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ಹನೂರು ಶಾಸಕ ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಉದ್ಯಮಿ ಡಿ.ನರಹರಿ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್, ಖಜಾಂಚಿ ಎಸ್.ಎನ್.ರಾಜು ಇತರರಿದ್ದರು.

ಇದೇ ವೇಳೆ 2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಶಾಸಕರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net