

ಚನ್ನಗಿರಿ: ದೇವರು ಮತ್ತು ಭಕ್ತರ ನಡುವಿನ ಕೊಂಡಿಯಂತೆ ಪುರೋಹಿತರು ಸೇವೆ ಮಾಡುತ್ತಾರೆ. ಭಕ್ತರ ಪ್ರೀತಿ, ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋದಾಗ ಮಾತ್ರ ಪುರೋಹಿತರು ಸಮಾಜದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ ಎಂದು ಬಾಳೆಹೊನ್ನೂರು ಶಾಖಾಮಠದ ಎಡೆಯೂರು ಕ್ಷೇತ್ರ ರೇಣುಕಾ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠದಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ತಾಲೂಕು ಘಟಕ ಸಹಯೋಗದಲ್ಲಿ ಪುರೋಹಿತ ಮಹಾಸಭಾದ 3ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಮಾತನಾಡಿದರು.
ಸಮಾಜದಲ್ಲಿ ಪುರೋಹಿತ ಕಾಯಕ ಮಾಡುವವರಿಗೆ ವಿಶೇಷ ಸ್ಥಾನಮಾನ, ಗೌರವ ಇದೆ. ಭಕ್ತರು ನಿಮ್ಮನ್ನು ದೇವರಂತೆ ಕಾಣುತ್ತಾರೆ. ಭಕ್ತರ ನಂಬಿಕೆಗೆ ಯಾವುದೇ ಚ್ಯುತಿ ಬಾರದ ರೀತಿ ನೀವು ನಡೆದುಕೊಂಡು ಅವರ ಮನಸ್ಸು ಗೆಲ್ಲಬೇಕೆಂದರು.
ಶಾಸಕ ಶಿವಗಂಗಾ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2 ವರ್ಷದ ಹಿಂದೆ ಶ್ರೀಮಠಕ್ಕೆ ಬಂದಾಗ ತಾವರೆಕೆರೆ ಶ್ರೀಗಳು, ನೀವು ಶಾಸಕರಾಗುತ್ತೀರಿ ಎಂದಿದ್ದರು. ಅವರ ಆಶೀರ್ವಾದದಿಂದ ಇಂದು ಶಾಸಕನಾಗಿದ್ದೇನೆ ಎಂದರು.
ಚುನಾವಣೆ ಮುಗಿದಿದೆ. ಜಾತಿ, ಧರ್ಮ, ಪಕ್ಷ ಬದಿಗಿಟ್ಟು ಎಲ್ಲರನ್ನು ಒಟ್ಟುಗೂಡಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಪುರೋಹಿತರಿಗಾಗಿ ಆರು ತಿಂಗಳಲ್ಲಿ ನಿವೇಶನ ಗುರುತಿಸಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅದರ್ಶ ಪುರೋಹಿತ ಮಹಾಂತೇಶ್ ಶಾಸ್ತ್ರೀ, ಮಕ್ಕಳ ತಜ್ಞ ಡಾ. ನಿತೀನ್ ಎಸ್. ಶಾಗ್ಲೆ, ಮೇಜರ್ ಸುನೀಲ್‌ಕುಮಾರ್, ಶಿಕ್ಷಕಿ ಎಚ್.ಸಿ. ಕವಿತಾ, ಶಿಕ್ಷಕ ಹೊದಿಗೆರೆ ನಾಗರಾಜ್ ಕುಂಬಾರ್, ಕೃಷಿಕ ರುದ್ರಮುನಿ ಆರ್. ರೇವಳ್ಳರ್ ಅವರನ್ನು ಗೌರವಿಸಲಾಯಿತು.
ಕವಲೆದುರ್ಗ ಮರುಳ ಸಿದ್ದೇಶ್ವರ ಶಿವಾಚಾರ್ಯ ಶ್ರೀ, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶ್ರೀ, ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶ್ರೀ, ಡಾ.ರಾಜಕುಮಾರ ಶಾಸ್ತ್ರೀಜಿ, ವೀರಶೈವ ಸಮಾಜದ ರಾಜಶೇಖರಯ್ಯ, ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಸುರೇಂದ್ರಗೌಡ ಹೊನ್ನಾಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಮಾವಿನಹೊಳೆ ಇದ್ದರು.