

ಮಂಡ್ಯ: ಭಾರತದಲ್ಲಿ ಸಹಕಾರ ಚಳವಳಿ ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದು ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಜಿಲ್ಲಾ ಖಾಸಗಿ ಶಾಲಾ ನೌಕರರ ಸಹಕಾರ ಸಂಘ ನಿಯಮಿತದಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ-ನಿವೃತ್ತ ನೌಕರರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಧುರೀಣ ಕೆ.ವಿ.ಶಂಕರಗೌಡ ಅವರ ದೂರದೃಷ್ಟಿತ್ವದ ಫಲದಿಂದ ಸಹಕಾರ ಕ್ಷೇತ್ರದಲ್ಲಿ ಜಿಲ್ಲೆ ಏಷ್ಯಾ ಮಟ್ಟದಲ್ಲಿ ಗುರುತಿಸಿಕೊಂಡಿದೆ. ರೈತರ ಸೊಸೈಟಿಯಿಂದ ಆರಂಭಗೊಂಡು ಎಲ್ಲ ಹಂತದಲ್ಲೂ ಸಹಕಾರ ಸಂಘಗಳು ರಚನೆಗೊಂಡು ಅಪಾರ ಕೊಡುಗೆ ನೀಡಿವೆ ಎಂದು ನುಡಿದರು.
1980ರಲ್ಲಿ ರಚನೆಗೊಂಡ ಮಂಡ್ಯ ಜಿಲ್ಲೆ ಅನುದಾನಿತ ಖಾಸಗಿ ಶಾಲಾ-ಕಾಲೇಜುಗಳ ನೌಕರರ ಸಂಘವಾಗಿದೆ. ಅವತ್ತಿನ ಎಲ್ಲ ಹಿರಿಯರು ಸೇರಿ ಸ್ಥಾಪಿಸಿ, 1,500 ಸದಸ್ಯರಿದ್ದರು. ಇಂದು ಕೇವಲ 328ಕ್ಕೆ ಇಳಿದಿದೆ. 135 ಜನ ಮಾತ್ರ ವ್ಯವಹಾರ ಮಾಡುತ್ತಿದ್ದಾರೆ. ಅಂದು 7 ರಿಂದ 8 ಕೋಟಿ ರೂ. ವ್ಯವಹಾರ ಮಾಡಿ, ಮಾದರಿ ಸಹಕಾರಿ ಸಂಘವಾಗಿ ಬೆಳೆದಿದ್ದ ಜಿಲ್ಲಾ ಖಾಸಗಿ ಶಾಲಾ ನೌಕರರ ಸಹಕಾರ ಸಂಘವು ಇಂದು 2 ಕೋಟಿ ರೂ. ವ್ಯವಹಾರಕ್ಕೆ ಕುಸಿದಿದೆ. ಸುಲಭವಾಗಿ ಸಾಲ ಪಡೆಯಬಹುದಿದ್ದ ಸಂಘದಲ್ಲಿ ಸದಸ್ಯರ ಕೊರತೆ ಹೆಚ್ಚಾಗಿದೆ. ಮರುಪಾವತಿ ಮಾಡುವ ಫಲಾನುಭವಿಗಳ ಇಚ್ಛಾಶಕ್ತಿ ಕಡಿಮೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಸೊಸೈಟಿ ಅಧ್ಯಕ್ಷ ವೈ.ಜೆ.ರಾಮಲಿಂಗೇಗೌಡ, ಉಪಾಧ್ಯಕ್ಷ ಸಿ.ರಾಮಲಿಂಗಯ್ಯ, ಸಿಇಒ ಎಂ.ಎಚ್.ಚಂದ್ರು, ನಿರ್ದೇಶಕರಾದ ಕೆ.ಆರ್.ಲಕ್ಷ್ಮೀಶ್, ಎನ್.ಕೃಷ್ಣ, ಡಿ.ಬಸವರಾಜು, ಎಂ.ಟಿ.ಚಂದ್ರಶೇಖರ್, ಪ್ರತಿಮಾರಾಣಿ ಇತರರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ನೌಕಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು.