ಪ್ರತಿಯೊಬ್ಬರ ಮೇಲಿದೆ ಸಾಮಾಜಿಕ ಋಣ: ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅಭಿಪ್ರಾಯ

maruthi
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಇಂದು ಸಂಘ ನೀಡುವ ವಿದ್ಯಾರ್ಥಿವೇತನ ಎನ್ನುವುದು ಸಾಲ ಇದ್ದಂತೆ. ಇಂದಿನ ಫಲಾನುಭವಿಗಳು ಕೆಲಸಕ್ಕೆ ಸೇರಿದ ಬಳಿಕ ಸಂಘಕ್ಕೆ 50 ವರ್ಷವಾದಾಗ ನಡೆಯುವ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದಾಗ ನೀವು ಸಾಲ ಮುಕ್ತರಾಗುತ್ತೀರಿ ಎಂದು ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಹೇಳಿದರು.

ಉಳ್ಳಾಲ ಮೊಗವೀರಪಟ್ಣ ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲ ಆಶ್ರಯದಲ್ಲಿ ಶನಿವಾರ ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಮಾರುತಿ ಯುವಕ ಮಂಡಲದ ವೇದಿಕೆಯಲ್ಲಿ ಪ್ರತಿಭಾ ಪುರಸ್ಕಾರ ಸನ್ಮಾನ ಹಾಗೂ ಗೌರವಧನ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ಣ ಉದ್ಘಾಟಿಸಿದರು. ಮಾರುತಿ ಜನಸೇವಾ ಸಂಘದ ಅಧ್ಯಕ್ಷ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.

ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಪಿ.ಅಮೀನ್, ಪ್ರಮುಖರಾದ ಡಾ.ಪ್ರಿಯಾ ಹರೀಶ್, ಮತ್ಸೊೃೀದ್ಯಮಿಗಳಾದ ಎಸ್.ಎಂ.ಫಾರೂಕ್, ಸಿಂಧೂರಾಮ್ ಪುತ್ರನ್, ಸೂರಜ್ ಮಂಗಳೂರು, ಮಾರುತಿ ಜನಸೇವಾ ಸಂಘದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಉಳ್ಳಾಲ ಠಾಣಾಧಿಕಾರಿ ಸಿ.ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಪ್ರಶಾಂತ್ ಬಿ.ಉಳ್ಳಾಲ್ ಸ್ವಾಗತಿಸಿದರು. ಕಪಿಲೇಶ್ ಎಸ್.ಬಂಗೇರ ಪ್ರಾಸ್ತಾವಿಕ ಮಾತನಾಡಿದರು.

ಸಾಧಕರಿಗೆ ಗೌರವಾರ್ಪಣೆ

ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಅರ್ಚಕರು, ಮಧ್ಯಸ್ಥರು, ಗುರಿಕಾರರು, ದೈವ ನರ್ತಕರು, ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವವರು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಿವೃತ್ತ ಯೋಧ ಕ್ಯಾ.ರಾಜೇಶ್, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ವಿಜಯ ಕಾಂಚನ್, ಸಮಾಜ ಸೇವಕ ರೋಹಿತ್ ಸಾಂಕ್ತುಸ್, ವರ್ಲ್ಡ್ ಸೈನ್ ಸ್ಕೋಲರ್ ಸಿಂಧೂರ ರಾಜ, ಎಸ್ಸೆಸ್ಸೆಲ್ಸಿಯಲ್ಲಿ ಸಾಧಕ ಚಿನ್ಮಯಿ ಜಿ.ಕೆ., ಕಲಾವಿದ ರಂಜನ್ ಬೋಳೂರು ಹಾಗೂ ಕ್ರೀಡಾಪಟು ಕೃತಿನ್ ಕೆ.ಸಾಲ್ಯಾನ್ ಅವರಿಗೆ ‘ಮಾರುತಿ ಸಾಧಕ ಪ್ರಶಸ್ತಿ’ ನೀಡಿ ಅಭಿನಂದಿಸಲಾಯಿತು.

ಭದ್ರತೆ ಇಲ್ಲ ಎನ್ನುವ ಕಾರಣಕ್ಕೆ ಯುವಸಮುದಾಯ ದೈವ ಚಾಕರಿ ಸೇವೆಯಲ್ಲಿ ಸ್ವಯಂ ಆಗಿ ಗುರುತಿಸಿಕೊಳ್ಳುವುದು ವಿರಳ. ಇವರಿಗೆ ಮಾರುತಿ ಜನಸೇವಾ ಸಂಘ ಭದ್ರತೆ ನೀಡುವ ಕಾರ್ಯ ಮಾಡಿದೆ. ಮೊಗವೀರ ಸಮುದಾಯದ ಸಾಂಸ್ಕೃತಿಕ ಗುರುತಾಗಿರುವ ಚೆನ್ನಮರ ಕಾಲದ ಹೆಸರನ್ನು ಅಬ್ಬಕ್ಕ ಉತ್ಸವ ಆಗುವಾಗ ಮಾತ್ರ ಒಂದು ದ್ವಾರಕ್ಕೆ ಹೆಸರಿಡುವ ಬದಲು ಎತ್ತರಕ್ಕೇರಿಸುವ ಕೆಲಸ ಸಂಘ ಮಾಡಬೇಕು. ಡಾ.ಅರುಣ್ ಉಳ್ಳಾಲ್, ಉಪನ್ಯಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net