ನುಡಿಜಾತ್ರೆ ಹಣದಲ್ಲಿ ಶಾಲೆ ಅಭಿವೃದ್ದಿಪಡಿಸಿ: ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸಲಹೆ

Pratibha Puraskar at Chikkamandya School Mandya
Published on

ಮಂಡ್ಯ: ರಾಜ್ಯದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು. ಅದರಂತೆ ವಾರ್ಷಿಕವಾಗಿ ನಡೆಸುವ ಸಮ್ಮೇಳನದ 30 ಕೋಟಿ ರೂ.ಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸಲಹೆ ನೀಡಿದರು.

ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಬಹುತೇಕ ಶಿಥಿಲಗೊಂಡಿವೆ. 10 ರಿಂದ 50 ವರ್ಷವಾಗಿರುವ ಕಟ್ಟಡಗಳಿವೆ. ಸಂಪೂರ್ಣ ಶಿಥಿಲಗೊಂಡು ವಿದ್ಯಾರ್ಥಿಗಳು ಶಾಲೆ ಬಾರದಂತಾಗಿದೆ. ಕ್ರೀಡಾ ಚಟುವಟಿಕೆಗೆ ಮೈದಾನಗಳಿಲ್ಲದಂತಾಗಿದೆ. ಒಂದೊಂದು ತಾಲೂಕಿಗೂ 5 ಕೋಟಿ ರೂ ಅನುದಾನ ನೀಡಿದರೆ ಶಾಲೆ ಅಭಿವೃದ್ಧಿಪಡಿಸಬಹುದು ಎಂದು ಎಚ್ಚರಿಸಿದರು.

ಹಳ್ಳಿಕೇಶ್ವರ ಮತ್ತು ಬೋರೇಶ್ವರ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನಿ, ತಂತ್ರಜ್ಞಾನಿಯಾಗುವ ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಗುರಿ ಇಟ್ಟುಕೊಂಡು ಶಿಕ್ಷಣ ಪಡೆಯಬೇಕು. ಆಗ ಯಶಸ್ಸು ನಿಮ್ಮದಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿವೆ. ವಾಯುಮಾಲಿನ್ಯ, ಅತಿವೃಷ್ಠಿ, ಅನಾವೃಷ್ಠಿಯಾಗಲು ಮನುಷ್ಯ ಮಾಡಿದ ಪ್ರಾಕೃತಿಕ ನಾಶ ಕಾರಣ. ವಿಪರೀತ ಬಿಸಿಲು, ಅತಿಯಾಗಿ ಮಳೆ, ಮತ್ತೊಮ್ಮೆ ಮಳೆ ಬಾರದ ಸ್ಥಿತಿಯ ದಿನಗಳು ಬರುತ್ತಿವೆ ಎಂದು ಎಚ್ಚರಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ವಿಶ್ವಾಸ ಹೆಚ್ಚಿದೆ. ಉತ್ತಮ ತರಬೇತಿ, ಶಿಕ್ಷಣ ಮಾರ್ಗದರ್ಶನ ನೀಡಿದರೆ ಸಾಧನೆ ಮಾಡಿ ದೇಶಕ್ಕೆ ಸೇವೆ ಮತ್ತು ಕೊಡುಗೆ ನೀಡುತ್ತಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾ.ಪಂ ಇಒ ಎಂ.ಎಸ್.ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಮುಖ್ಯಶಿಕ್ಷಕ ಎಚ್.ಎನ್.ದೇವರಾಜು, ಟ್ರಸ್ಟ್ ಉಪಾಧ್ಯಕ್ಷ ಡಾ.ಕೆ.ಬಿ.ಬೋರಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಗ್ರಾ.ಪಂ ಉಪಾಧ್ಯಕ್ಷೆ ಗೀತಾ, ಸದಸ್ಯೆ ಮಮತಾ, ಮಾಜಿ ಸದಸ್ಯೆ ಪ್ರಭಾವತಿ, ಪರಿಸರ ಸಂಸ್ಥೆ ಅಧ್ಯಕ್ಷ ಎಂ.ಯೋಗೇಶ್ ಮಂಗಲ, ಶಿಕ್ಷಕ ದೇವರಾಜು, ಟ್ರಸ್ಟಿಗಳಾದ ಜವರೇಗೌಡ, ದೇವರಾಜ್, ಎಂ.ಎಲ್.ವೆಂಕಟೇಶ್, ಧನುಷ್‌ಗೌಡ, ದಿನೇಶ್, ವಿನಯ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net