ಪ್ರತಿಭಾ ಪೋಷಕದಿಂದ ಗ್ರಾಮೀಣರಿಗೆ ನೆರವು

04Jaggu7
ಬೆಳಗಾವಿ ಶಿವಬಸವ ನಗರದಲ್ಲಿ ರಾಜಲಕ್ಷ್ಮೀ ಚಿಲ್ಡ್ರನ್ ಫೌಂಡೇಷನ್‌ನ ಪ್ರತಿಭಾ ಪೋಷಕ ಉಪಕ್ರಮದ ಮೂರನೇ ಬ್ಯಾಚ್ ಪ್ರಾರಂಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಡಾ.ವಿಜಯಲಕ್ಷ್ಮೀ, ಡಾ.ಶಶಿಕಾಂತ ಕುಲಗೋಡ, ಡಿಡಿಪಿಐ ಲೀಲಾವತಿ ಹಿರೇಮಠ, ಎಂಡಿ ರಾಮ್ ಮಲ್ಯ, ಗಿರಿಜಾ ಶೆಟ್ಟಿ, ಡಾ.ಕೀರ್ತಿ ಶಿವಕುಮಾರ ಇತರರಿದ್ದರು.
Published on

ಬೆಳಗಾವಿ: ರಾಜಲಕ್ಷ್ಮೀ ಚಿಲ್ಡ್ರನ್ ಫೌಂಡೇಷನ್‌ನ ಪ್ರತಿಭಾ ಪೋಷಕ ಉಪಕ್ರಮದ ಮೂರನೇ ಬ್ಯಾಚ್‌ಗೆ ಈಚೆಗೆ ಶಿವಬಸವನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಚಾಲನೆ ನೀಡಲಾಯಿತು.

ರಾಜಲಕ್ಷ್ಮೀ ಚಿಲ್ಡ್ರನ್ ಫೌಂಡೇಷನ್‌ನ ಸಂಸ್ಥಾಪಕ ನಿರ್ದೇಶಕರಾದ ಡಾ.ವಿಜಯಲಕ್ಷ್ಮೀ, ಡಾ.ಶಶಿಕಾಂತ ಕುಲಗೋಡ ಮಾತನಾಡಿ, ಪ್ರತಿಭಾ ಪೋಷಕ ಕಾರ್ಯಕ್ರಮವು ವಿಶೇಷವಾಗಿ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಕೆಳಸ್ತರದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಬೆಂಬಲಿಸುವ ಗುರಿ ಹೊಂದಿದೆ. ವಿಶೇಷ ತಾರ್ಕಿಕ ಚಿಂತನಾ ಕೌಶಲ ಒರೆಗೆ ಹಚ್ಚುವ ಆಯ್ಕೆ ಪರೀಕ್ಷೆಯ ಮೂಲಕ ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಾಲ್ಕು ವರ್ಷಗಳಲ್ಲಿ ಈ ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ, ಸ್ಪರ್ಧಾತ್ಮಕ ಮನೋಭಾವದ ವಿಕಾಸಕ್ಕಾಗಿ ಬೆಂಬಲ ಒದಗಿಸಲಾಗುತ್ತದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 52 ವಿದ್ಯಾರ್ಥಿಗಳು ಸೇರಿ ಉತ್ತರ ಕರ್ನಾಟಕದ 9 ಜಿಲ್ಲೆಗಳು ಮತ್ತು ನೆರೆಯ ಜಿಲ್ಲೆಗಳ ಅನೇಕ ವಿದ್ಯಾರ್ಥಿಗಳು ಈ ಉಪಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ಡೈಮಂಡ್ ಮೆಟಲ್ ಸ್ಕ್ರೀನ್ಸ್ ಪ್ರೈವೇಟ್ ಲಿ. 12 ವಿದ್ಯಾರ್ಥಿಗಳನ್ನು ಪ್ರಾಯೋಜಿಸಿದ್ದರೆ, ವಾಯವ್ಯ ಲ್ಯಾಬ್ಸ್ ಮತ್ತು ಅಲೈಡ್ ಫೌಂಡರ್ಸ್ ಪ್ರೈವೇಟ್ ಲಿ. ಕ್ರಮವಾಗಿ 6 ಮತ್ತು 9 ವಿದ್ಯಾರ್ಥಿಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದಾರೆ ಎಂದರು. ರಾಜಲಕ್ಷ್ಮೀ ಚಿಲ್ಡ್ರನ್ ಫೌಂಡೇಷನ್‌ನ ತಾಂತ್ರಿಕ ನಿರ್ದೇಶಕ ಡಾ.ರವೀಂದ್ರ ಗುರುವಣ್ಣನವರ ಮಾತನಾಡಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಶಿರಸಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಸೇರಿ 9 ಶೈಕ್ಷಣ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದರು. ನಾಗನೂರು ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ, ಅಲೈಡ್ ಫೌಂಡರ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಮತ್ತು ಎಂಡಿ ರಾಮ್ ಮಲ್ಯ, ವಾಯವ್ಯ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ಗಿರಿಜಾ ಶೆಟ್ಟಿ, ಡಾ.ಕೀರ್ತಿ ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net