

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಸುಪ್ತವಾಗಿ ಅಡಗಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ ಎಂದು ಮನಗುಂಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಜಗದೀಶ ಕರಿಯಮ್ಮನವರ ಹೇಳಿದರು.
ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ಹಂತದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಕಲಿಕೆಯೊಂದಿಗೆ ಪ್ರತಿಭೆ ಪ್ರದರ್ಶಕ್ಕೆ ಇಲಾಖೆಯ ಪ್ರತಿಭಾ ಕಾರಂಜಿ ಯೋಜನೆ ಸಹಕಾರಿಯಾಗಿದೆ. ಮಕ್ಕಳು ಉತ್ತಮ ಮೌಲ್ಯ ರೂಢಿಸಿಕೊಂಡು ಕಲಿಕಾ ಪ್ರಕ್ರಿಯೆಗಳ ಜತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದರು.
ಶಿಕ್ಷಕ ರಂಗನಾಥ ವಾಲ್ಮೀಕಿ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳು ಜರುಗುತ್ತಿದ್ದು, ಮಕ್ಕಳು ತಮಗೆ ಇಷ್ಟವಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲು ಪ್ರತಿಭಾ ಕಾರಂಜಿ ಸಹಕಾರಿ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಅವುಗಳನ್ನು ಸಮಾನವಾಗಿ ಸ್ವೀಕರಿಸಿ ಪ್ರತಿಭೆ ಪ್ರದರ್ಶನಕ್ಕೆ ಮುಂದಾಗಬೇಕು ಎಂದರು.
ಶಾಲಾ ಶಿಕ್ಷಕರು ಸ್ಪರ್ಧಾ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಶಾಲಾ ಸಿಬ್ಬಂದಿ ಜೆ.ಆರ್. ಬಾಳೇರಿ, ಬಿ.ಪಿ. ಜೋಶಿ, ಪ್ರಮೋದ ವಾದಿರಾಜ, ಸತ್ಯನಾರಾಯಣ ಜೋಶಿ, ಸಿ.ಸಿ ಹಿರೇಮಠ, ಎಸ್.ಸಿ ಗೊರವರ , ಎನ್.ಜಿ. ಬಾಗವಾನ್, ಇತರರು ಇದ್ದರು.