

ತಿ.ನರಸೀಪುರ: ಮಕ್ಕಳಲ್ಲಿ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳ ಕುರಿತು ಉತ್ಸಾಹ ತುಂಬಲು ಹಾಗೂ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ ಎಂದು ಪುರಸಭೆ ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಬಳಿಯಿರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ಯೋಜನಾ ಸಮನ್ವಯಾಧಿಕಾರಿ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಪಡೆಯಬೇಕೆಂಬ ಉತ್ಸಾಹ ಪ್ರತಿ ಮಗುವಿನಲ್ಲೂ ಇರಬೇಕು. ನಾವೂ ಕೂಡ ಪ್ರತಿಭಾವಂತವರು ಎಂಬುದನ್ನು ಅರಿಯಲು ಪ್ರತಿಭಾ ಕಾರಂಜಿ ಉತ್ತಮ ಕಾರ್ಯಕ್ರಮ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಮಾತನಾಡಿ, ಶಿಕ್ಷಣ ಎಂದರೆ ನಾಲ್ಕು ಗೋಡೆಗಳ ನಡುವೆ ಕೂರಿಸಿ ಪಾಠ ಮಾಡುವುದಲ್ಲ. ಮಕ್ಕಳನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಪಡಿಸುವ ಹಾಗೂ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಟ್ಟು ವಿಶಿಷ್ಟ ಸಾಧನೆ ಮಾಡಲು ಪ್ರತಿಭಾ ಕಾರಂಜಿ ವೇದಿಕೆಯಾಗಲಿದೆ ಎಂದರು.
ಸೋಸಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಬಿಆರ್‌ಸಿ ನಾಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ದೈಹಿಕ ಪರಿವೀಕ್ಷಕ ಮರಿಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಸ್.ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು, ನೋಡಲ್ ಅಧಿಕಾರಿ ಜಗದೀಶ್, ಮುಖ್ಯ ಶಿಕ್ಷಕ ಎಂ.ಪಿ.ಮಂಜಣ್ಣ, ಉಪ ಪ್ರಾಂಶುಪಾಲರು ಪುಟ್ಟಸ್ವಾಮಿ, ಸಹ ಶಿಕ್ಷಕರಾದ ನಾಗರಾಜು, ಪ್ರಸಾದ್, ಮಹದೇವಸ್ವಾಮಿ, ಎ.ಗಜೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜು, ಸದಸ್ಯ ಬೇಕರಿ ಸೋಮಣ್ಣ, ಮುಖಂಡರಾದ ಶ್ರೀಕಂಠ, ಮಹೇಶ ಇತರರು ಇದ್ದರು.