ಶೈಕ್ಷಣಿಕ ಬಲವರ್ಧನೆಗೆ ಪ್ರತಿಭಾ ಕಾರಂಜಿ ಸಹಕಾರಿ

ಕುಶಾಲನಗರ ಸಮೀಪದಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ  ಸ್ಪರ್ಧೆಯಲ್ಲಿ ಮಕ್ಕಳ ವಿವಿಧ ವೇಷಭೂಷಣ ಗಮನ ಸೆಳೆಯಿತು.
ಕುಶಾಲನಗರ ಸಮೀಪದಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಕ್ಕಳ ವಿವಿಧ ವೇಷಭೂಷಣ ಗಮನ ಸೆಳೆಯಿತು.
Published on

ಕುಶಾಲನಗರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಇಂತಹ ಕಾರ್ಯಕ್ರಮ
ಶೈಕ್ಷಣಿಕ ಬಲವರ್ಧನೆಗೆ ಸಹಕಾರಿ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಕೂಡಿಗೆ ಶೈಕ್ಷಣಿಕ ಕ್ಲಸ್ಟರ್ ಕೇಂದ್ರದ ವತಿಯಿಂದ ಕೂಡಿಗೆ ಸಮೀಪದ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ, ಎಸ್.ಎಲ್.ಎನ್. ಕಾಫಿ ಪ್ರೈ.ಲಿ. ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಕೂಡಿಗೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಶಿಕ್ಷಣ, ಮನರಂಜನೆ ಹಾಗೂ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಜತೆಗೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರುತ್ತದೆ. ಇದರೊಂದಿಗೆ ಕಲಿಕೆ ಹಾಗೂ ಹೊಸದಾದ ಜೀವನ ಕೌಶಲವನ್ನು ಹೊಂದಬಹುದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಂ.ವಿ.ಮಂಜೇಶ್, ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆ. ಹಾಗಾಗಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಕರೊಂದಿಗೆ ಪಾಲಕರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್ ಮಾತನಾಡಿ, ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಮಕ್ಕಳ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಲಾಗಿದೆ ಎಂದು ಶ್ಲಾಘಿಸಿದರು.

ಮಕ್ಕಳ ಸ್ಪರ್ಧೆಗಳ ಕುರಿತು ಸಿಆರ್‌ಪಿ ಕೆ.ಶಾಂತಕುಮಾರ್ ಮಾಹಿತಿ ನೀಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎ.ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಎಚ್.ಆರ್.ಶಶಿಕಲಾ, ಶಿಕ್ಷಕರ ಸಂಘಟನೆಯ ಪ್ರಮುಖರಾದ ಎಸ್.ಎ.ಯೋಗೇಶ್, ಎಚ್.ಎಸ್.ಉಮಾದೇವಿ, ಎಸ್‌ಡಿಎಂಸಿ ಸದಸ್ಯರಾದ ಜ್ಯೋತಿ ಪ್ರಕಾಶ್, ನಾಗೇಂದ್ರ, ಶಿವಕುಮಾರ್, ಅರುಣ, ಜಯಮ್ಮ, ನಿವೃತ್ತ ಶಿಕ್ಷಕರಾದ ಸಿ.ಎಂ.ಸುಲೋಚನಾ, ಎಚ್.ಟಿ.ವಸಂತಾ, ತಮ್ಮಯ್ಯ, ಸಿಆರ್‌ಪಿಗಳಾದ ಟಿ.ಈ.ವಿಶ್ವನಾಥ, ಸುಂಟಿಕೊಪ್ಪ ಸೀಮಾ, ಹೆಬ್ಬಾಲೆ ಆದರ್ಶ್ ಇತರರಿದ್ದರು.

ಅನಾವರಣಗೊಂಡ ಪ್ರತಿಭೆ: ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಮಕ್ಕಳು ವಿವಿಧ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಬಳಿಕ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಂಠಪಾಠ, ಧಾರ್ಮಿಕ ಪಠಣ, ಛದ್ಮವೇಷ ಸ್ಪರ್ಧೆ, ರಸಪ್ರಶ್ನೆ, ರಂಗೋಲಿ, ಜಾನಪದ ಗೀತೆ, ಕವ್ವಾಲಿ, ಕ್ಲೇ ಮಾಡಲಿಂಗ್, ಭಾಷಣ, ಪ್ರಬಂಧ ಸ್ಪರ್ಧೆ ಸೇರಿದಂತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net