

ಹೆಬ್ರಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮುನಿಯಾಲು ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ಕುಕ್ಕುಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವದಲ್ಲಿ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ಪ್ರಥಮ, 4 ದ್ವೀತಿಯ ಹಾಗೂ 7 ತೃತೀಯ ಸೇರಿ 14 ಪ್ರಶಸ್ತಿಗಳು ಲಭಿಸಿದೆ.
ಹಿರಿಯರ ವಿಭಾಗದಲ್ಲಿ ಸುಜಿತ್ ಮಿಮಿಕ್ರಿಯಲ್ಲಿ, ಭಕ್ತಿಗೀತೆಯಲ್ಲಿ ಪ್ರಣೀತಾ ಮತ್ತು ಅವಿನಾಶ್ ದೇಶಭಕ್ತಿಗೀತೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯರ ವಿಭಾಗದ ಛದ್ಮವೇಷದಲ್ಲಿ ಆಯುಷ್ ಕೆ.ಎಸ್., ಹಿರಿಯರ ವಿಭಾಗದ ಕ್ಲೇ ಮಾಡಲಿಂಗ್ ನಲ್ಲಿ ಗಗನ್, ಪ್ರೌಢ ವಿಭಾಗದಲ್ಲಿ ಮಿಮಿಕ್ರಿಯಲ್ಲಿ ಪ್ರೀತಮ್, ಆಶುಭಾಷಣದಲ್ಲಿ ಯಕ್ಷಿತ್ ದ್ವೀತಿಯ ಪ್ರಶಸ್ತಿ ಪಡೆದಿದ್ದಾರೆ. ಕಿರಿಯರ ವಿಭಾಗದ ಕ್ಲೇ ಮಾಡೆಲಿಂಗ್‌ನಲ್ಲಿ ಮನೀಷ್, ಪ್ರೌಢವಿಭಾಗದ ಶ್ರೇಯಸ್ ರಂಗೋಲಿಯಲ್ಲಿ, ಮಾನ್ವಿ ರಸಪ್ರಶ್ನೆಯಲ್ಲಿ ಮತ್ತು ಪ್ರತೀಕ್ಷಾ ಕನ್ನಡ ಭಾಷಣದಲ್ಲಿ ತೃತೀಯ ಪ್ರಶಸ್ತಿ ಪಡೆದಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಮುಖ್ಯಶಿಕ್ಷಕ ಹರೀಶ ಪೂಜಾರಿ, ಶಿಕ್ಷಕರು, ಸಮಿತಿಯ ಸದಸ್ಯರು, ಪ್ರಮುಖರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.