ಬೇಡಿಕೆಗೆ ಸ್ಪಂದಿಸದಿದ್ರೆ ಕರ್ತವ್ಯಕ್ಕೆ ಗೈರು

10-7hbd2
ಹುಮನಾಬಾದ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಬುಧವಾರ ಆಯೋಜಿಸಿದ್ದ ನೌಕರ ಭವನ ಲೋಕಾರ್ಪಣೆ, ನಿವೃತ್ತರು ಮತ್ತು ತಾಲೂಕಿನ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಕಲ್ಲೂರ, ನಾಗಶೆಟ್ಟಿ ಡುಮಣಿ, ಬಸವರಾಜ ಇತರರಿದ್ದರು.
Published on

ಹುಮನಾಬಾದ್: ರಾಜ್ಯ ಸರ್ಕಾರಿ ನೌಕರರ ೭ನೇ ವೇತನ ಆಯೋಗದ ವರದಿ ಯಥಾವತ್ ಜಾರಿ ಇತರ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸದಿದ್ದರೆ ರಾಜ್ಯಾದ್ಯಂತ ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಬುಧವಾರ ಆಯೋಜಿಸಿದ್ದ ನೌಕರ ಭವನ ಲೋಕಾರ್ಪಣೆ, ನಿವೃತ್ತರು ಮತ್ತು ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಸಮ್ಮತವಾಗಿರುವ ನೌಕರರ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಹಲವಾರು ಸಲ ಮನವಿ ಮಾಡಲಾಗಿದೆ ಎಂದರು.

೭ನೇ ವೇತನ ಆಯೋಗದ ವರದಿ ಜಾರಿ, ಎನ್‌ಪಿಎಸ್‌ನಿಂದ ಒಪಿಎಸ್, ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಇತರ ಸಚಿವರು, ಜು.೧೪ರಂದು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಸಕರು, ಉಸ್ತುವಾರಿ ಮಂತ್ರಿ, ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು. ೨೩ರಂದು ಸಂಘದ ಸಭೆ ನಡೆಸಿ ಹೋರಾಟದ ರೋಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ನೌಕರ ಸಂಘಟಿತರಾಗಿ ಸಂಘ ಕೈಗೊಳ್ಳುವ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ತಾಲೂಕು ಸಂಘದಿಂದ ಸುಮಾರು ೪೦ ಲಕ್ಷ ವೆಚ್ಚದ ನೌಕರರ ಭವನ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು.

ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ಸರ್ಕಾರಿ ನೌಕರರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸರ್ಕಾರಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರು ಬರಲು ನೌಕರರೇ ಕಾರಣ. ಹೀಗಾಗಿ ಪ್ರತಿಯೊಬ್ಬ ನೌಕರ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ ಮಾತನಾಡಿದರು. ಸಂಘದ ರಾಜ್ಯ ಉಪಾಧ್ಯಕ್ಷರಾದ ಬಸವರಾಜ, ಹರ್ಷ, ಸಿದ್ದೇಶ, ತಾಲೂಕು ಪದಾಧಿಕಾರಿಗಳಾದ ರಾಜಶೇಖರ ತಂಬಾಕೆ, ಬಕ್ಕಪ್ಪ ಮನ್ನಳ್ಳಿ, ಮಾಣಿಕ ನಾಗನೈಕ, ಸಂಗಮೇಶ ಜಮಗಿ, ಈಶ್ವರ ತಡೋಳಾ, ಶಿವಕುಮಾರ ಕಂಪ್ಲಿ, ಮಹೇಶ ಅನಂತ ವಾಡಕರ್, ಸುಭಾಷ ಪಾಟೀಲ್, ಶರದ ನಾರಾಯಣಪೇಟಕರ್, ಶಿವಕಾಂತ ದಂಡೆ, ಮಾರುತಿ ಪೂಜಾರಿ, ವೀರಂತರೆಡ್ಡಿ ಜಂಪಾ, ಅಧಿಕಾರಿಗಳಾದ ಡಾ.ಗೋವಿಂದ, ವೆಂಕಟೇಶ ಗೂಡಾಳ ಇತರರಿದ್ದರು. ರೇವಣಸಿದ್ದಯ್ಯ ಮಠಪತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಣೆ ಮಾಡಿದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ನೌಕರರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ನಿವೃತ್ತ ನೌಕರರು, ನೌಕರ ಭವನ ನಿರ್ಮಾಣಕ್ಕೆ ಅನುದಾನ ನೀಡಿರುವ ಹಾಗೂ ಮಾಜಿ ಅಧ್ಯಕ್ಷರಿಗೆ ಗೌರವ ಸನ್ಮಾನ ನೀಡಲಾಯಿತು.

ಜು.೨೩ರಂದು ಸಂಘದ ಸಭೆ ನಡೆಸಿ ಹೋರಾಟದ ರೋಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ನೌಕರ ಸಂಘಟಿತರಾಗಿ ಸಂಘ ಕೈಗೊಳ್ಳುವ ಹೋರಾಟಕ್ಕೆ ಬೆಂಬಲ ನೀಡಬೇಕು.
| ಸಿ.ಎಸ್.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net