ಆರ್ಥಿಕ ಸಂಕಷ್ಟದಲ್ಲಿರುವ ಸಮುದಾಯದವರ ನೆರವಿಗೆ ನಿಲ್ಲೋಣ: ಬ್ರಾಹ್ಮಣಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಹೇಳಿಕೆ

Prathiba Puraskara
Published on

ಮಂಡ್ಯ: ಬ್ರಾಹ್ಮಣರು ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಬೆಳೆಯಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಹಾರ‌್ನಳ್ಳಿ ಅಭಿಪ್ರಾಯಸಿದರು.

ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಬಳಗ ಮತ್ತು ಜಿಲ್ಲಾ ವಿಪ್ರ ಬಳಗ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನೆ, ಧನ ಸಹಾಯ, ಅಗತ್ಯ ಉಳ್ಳವರಿಗೆ ಆಹಾರ ಕಿಟ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರರು, ಸಮಾಜದಲ್ಲಿ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣ ಸಮಾಜ ಸ್ವಾಭಿಮಾನ ಬುದ್ಧಿಶಕ್ತಿಯಿಂದ ಉನ್ನತಮಟ್ಟದಲ್ಲಿ ಬೆಳೆಯುವ ಪ್ರಯತ್ನ ಮಾಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿ ಸಲ್ಲಬೇಕಿದೆ. ಪ್ರಾಚೀನ ಸಂಸ್ಕೃತಿಯಾದ ಸಂಸ್ಕಾರಗಳನ್ನು ತಮ್ಮ ದೈನಂದಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮಾಜದ ಒಂದು ಶಕ್ತಿಯಾಗಿ ಬೆಳೆಯಲು ಕಾರ್ಯಶೀಲರಾಗಬೇಕು ಎಂದು ನುಡಿದರು.

ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದು, ಸಮಾಜದಲ್ಲಿ ಮುಂದುವರೆದ ವ್ಯಕ್ತಿಗಳು ಇತರರಿಗೆ ಸಹಾಯ ಮಾಡಿ ಅವರನ್ನು ಮೇಲೆತ್ತುವ ಕಾರ್ಯವಾಗಬೇಕು. ಎಲ್ಲ ವರ್ಗದ ಜನರಿಂದ ಪೂಜಿಸಲ್ಪಡುವ ಹಾಗೂ ಗೌರವಿಸಲ್ಪಡುವ ಬ್ರಾಹ್ಮಣ ಜನಾಂಗ ಮೂಢನಂಬಿಕೆಗಳ ಮರೆಹೋಗದೆ ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬೆಳೆಯಬೇಕಾಗಿದೆ. ರಾಜ್ಯ ಸರ್ಕಾರ ಸ್ಥಾಪಿಸಿರುವ ಬ್ರಾಹ್ಮಣ ಪ್ರಾಧಿಕಾರದ ಸೌಲಭ್ಯಗಳನ್ನು ಪಡೆಯಲು ಸಮುದಾಯದವರು ಕಾರ್ಯಶೀಲರಾಗುವಂತೆ ಮನವಿ ಮಾಡಿದರು.

ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಮಾತನಾಡಿ, ಬೇರೆಯವರಿಗೆ ಬೋಧನೆ ಮಾಡುವ ಮೊದಲು ತಾವು ಅದನ್ನು ಎಷ್ಟು ಅನುಷ್ಠಾನಗೊಳಿಸಿದ್ದೇವೆ ಎಂಬುದನ್ನು ಮನಗಾಣಬೇಕಾಗಿದೆ. ಸಾಂಪ್ರದಾಯಗಳ ಇಂದಿನ ಮಹತ್ವ, ಆರಾಧನೆ ಮತ್ತು ಮೌಢ್ಯತೆಯಿಂದ ಹೊರ ಬಂದು ವಾಸ್ತವ ಸತ್ಯವನ್ನು ಮತ್ತು ಅವುಗಳಿಂದ ಆಗುವ ಪರಿಣಾಮಗಳ ಕುರಿತು ಬ್ರಾಹ್ಮಣ ಸಮುದಾಯದವರು ಎಚ್ಚೆತ್ತುಕೊಳ್ಳಬೇಕು. ರಾಜ್ಯ ಹಾಗೂ ರಾಷ್ಟ್ರದ ಸೇವೆಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರ ಕೊಡುಗೆ ಅನನ್ಯವಾಗಿದೆ. ಇದಕ್ಕೆ ತಾಂತ್ರಿಕ ಕ್ಷೇತ್ರದಲ್ಲಿ ಶ್ರಮಿಸಿದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರೇ ಸಾಕ್ಷಿಯಾಗಿದ್ದಾರೆ ಎಂದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸಭಾದ ಉಪಾಧ್ಯಕ್ಷ ನಟರಾಜ್ ಜೋಯಿಸ್, ಹಿರಿಯಣ್ಣಸ್ವಾಮಿ, ರವೀಂದ್ರ, ಕಾರ್ತಿಕ್, ಜಿಲ್ಲಾ ಸಭಾಧ್ಯಕ್ಷ ಶಂಕರನಾರಾಯಣಶಾಸ್ತ್ರಿ, ಹೊಳಲು ರಾಘವೇಂದ್ರ, ಜಿ.ವಿ.ನಾಗರಾಜು, ಜಿ.ವಿ.ಕುಮಾರ್ ಇತರರಿದ್ದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವರಾಹ ಹರಿವಿಠಲದಾಸರು, ವೇದಬ್ರಹ್ಮ ಪ್ರಕಾಶ್, ಕೆ.ಜಿ.ಅನಂತರಾವ್, ಡಿ.ಎನ್.ಶ್ರೀಪಾದು, ಎಂ.ವೆಂಕಟೇಶ್, ಹರೀಶ್ ಹೆಮ್ಮನಹಳ್ಳಿ, ಸಿ.ಪಿ.ವಿದ್ಯಾಶಂಕರ್, ಪ್ರೇಮ ಹಂದೆ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net